ಬದುಕುವ ವೇತನ ಜಾರಿಗೆ ಆಗ್ರಹ: ಎ. ನರಸಿಂಹಮೂರ್ತಿ
ತುಮಕೂರು: ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಕಾರ್ಮಿಕರ ದಿನ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿಯವರು ರಷ್ಯಾದಲ್ಲಿ ನಡೆದ ಕಾರ್ಮಿಕ ಚಳವಳಿಯ ಪರಿಣಾಮವಾಗಿ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಯಿತು.
ಅಂದು ಕಾರ್ಲ್ ಮಾರ್ಕ್ಸ್ ಅವರು ಕಾರ್ಮಿಕರ ಮೇಲಿನ ಶೋಷಣೆಯನ್ನು ತಮ್ಮ ದಾಸ್ ಕ್ಯಾಪಿಟಲ್ ಗ್ರಂಥದಲ್ಲಿ ಬರೆದು ಕಾರ್ಮಿಕರ ಚಳವಳಿಗೆ ನಾಂದಿ ಹಾಡಿದರೂ ಸಹ ಇಂದು ಅಸಂಘಟಿತ ಕಾರ್ಮಿಕರ ಮೇಲಿನ ಶೋಷಣೆ ನಿಂತಿಲ್ಲ. ಭಾರತದ ಜನಸಂಖ್ಯೆಯಲ್ಲಿ ಸುಮಾರು 42 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಅದೇ ರೀತಿ ಕರ್ನಾಟಕದ ಜನಸಂಖ್ಯೆಯಲ್ಲಿ 40 ಲಕ್ಷ ಅಸಂಘಟಿತ ಕಾರ್ಮಿಕರಿದ್ದಾರೆ. ಇವರ ಮೇಲೆ ಗುತ್ತಿಗೆದಾರರು, ಮಧ್ಯವರ್ತಿಗಳು ಶೋಷಣೆ ಮಾಡುತ್ತಿದ್ದಾರೆ. ಕಾರ್ಮಿಕರು ತಮ್ಮ ಶ್ರಮಕ್ಕೆ ತಾವೇ ಕೂಲಿಯನ್ನು ಇಂದು ನಿರ್ಧಾರ ಮಾಡುವಂತಹ ಪರಿಸ್ಥಿತಿಯಿಲ್ಲ. ಬದಲಿಗೆ ಬೇರೆ ಯಾರೋ ಕೂಲಿಯನ್ನು ನಿರ್ಧರಿಸುತ್ತಿರುವುದರಿಂದ ಇವರಿಗೆ ನೈಜಕೂಲಿ ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಹತ್ತು ಸಾವಿರ ವೇತನ ನೀಡುವುದಾಗಿ ಘೋಷಿಸಿವೆ. ಆದರೆ ಕಾರ್ಮಿಕರಿಗೆ ಬದುಕುವ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು.