ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿ.ಸಿ. ನಾಗೇಶ್ರನ್ನು ಮನೆಗೆ ಕಳುಹಿಸಿ: ಜಿಎಸ್ಬಿ

Rashmi Kasaragodu
Updated On : 2 May 2013, 12:13 pm

ತಿಪಟೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೆಸರಿನ ಬಲದಿಂದ ಗೆದ್ದು, ಶಾಸಕರಾಗಿ ಅವರ ಬೆನ್ನಿಗೆ ಚೂರಿ ಹಾಕಿದವರಲ್ಲಿ ಜಿಲ್ಲೆಯ ಶಾಸಕರುಗಳಲ್ಲಿ ತಿಪಟೂರು ತಾಲೂಕಿನ ಬಿ.ಸಿ.ನಾಗೇಶ್ ಮೊದಲಿನವರಾದರೆ, ನಂತರದ ಸ್ಥಾನ ಸೊಗಡು ಶಿವಣ್ಣ ಮತ್ತು ಸುರೇಶ್ ಗೌಡರದ್ದು. ಇದನ್ನು ತಾವು ಯಾರೂ ಮರೆಯದೆ ಈ ಶಾಸಕರನ್ನು ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ ಠೇವಣಿ ಸಹ ಬರದಂತೆ ಸೋಲಿಸುವ ಮೂಲಕ ಯಡಿಯೂರಪ್ಪನವರಿಗೆ ನ್ಯಾಯ ಸಲ್ಲಿಸಬೇಕೆಂದು ಸಂಸದ ಜಿ.ಎಸ್. ಬಸವರಾಜು  ಗುಡುಗಿದರು.
ಬುಧವಾರ ನಡೆದ ಕೆಜೆಪಿ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿ ಅಭ್ಯರ್ಥಿ ಲೋಕೇಶ್ವರ ಪರ ಮಾತನಾಡಿದ ಸಂಸದರು ಈ ರಾಜ್ಯದಲ್ಲಿಯೇ ಅಪರೂಪದ ಮುಖ್ಯಮಂತ್ರಿ ಬಿ.ಎಸ್.ವೈ.  ಮೂರೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ತಿಪಟೂರು ತಾಲೂಕಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ತಾಲೂಕಿನ ಅಭಿವೃದ್ಧಿಗೆಂದು 450ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದರು. ಆದರೆ ತಾಲೂಕಿನ ಶಾಸಕರು ನಾನೇ ಅಭಿವೃದ್ಧಿ ಹರಿಕಾರನೆಂದು ಬಿಂಬಿಸಿಕೊಳ್ಳುತ್ತಾ ಜನತೆಗೆ ಮೋಸಮಾಡಲು ಯತ್ನಿಸುತ್ತಿದ್ದಾರೆ. ಅಂತಹ ಶಾಸಕರಿಗೆ ಬುದ್ಧಿ ಕಲಿಸಬೇಕೆಂದರು.
ಬಿಎಸ್ವೈರಿಂದ ಅನೇಕ ಯೋಜನೆ: ಬಿ.ಎಸ್.ವೈ ಅವರು ರಾಜ್ಯದ ಎಲ್ಲಾ ಸಮುದಾಯದ ಜನರನ್ನು ಗಮನದಲ್ಲಿಟ್ಟುಕೊಂಡು ರೈತರ, ಬಡವರ, ಮಹಿಳೆಯರ, ದಲಿತರ ಕಾರ್ಮಿಕರಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮತ್ತೆ ಅವರು ಮುಖ್ಯಮಂತ್ರಿಯಾದರೆ ಬರಗಾಲ ಪೀಡಿತ 9 ಜಿಲ್ಲೆಗಳ 43 ತಾಲೂಕುಗಳಿಗೆ ಅನುಕೂಲವಾಗುವಂತೆ ನೇತ್ರಾವತಿ ಯೋಜನೆ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಅವರಿಗೆ ಶಕ್ತಿ ತುಂಬಲು ಕಲ್ಪತರು ನಾಡಿನ ಮತದಾರರು ದಕ್ಷರಾದಂತಹ ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಬೇಕಾಬಿಟ್ಟಿ ಹೇಳಿಕೆ ಸರಿಯಲ್ಲ: ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಮಾತನಾಡಿ ಬಿಜೆಪಿ ಶಾಸಕರು ಬೇಕಾಬಿಟ್ಟಿ ಹೇಳಿಕೆ ಕೊಡುವುದು ಸರಿಯಲ್ಲ, ಸುಸಂಸ್ಕೃತ ಶಾಸಕರಂತೆ ವರ್ತಿಸುತ್ತಿರುವ ನಾಗೇಶ್ ಅವರ ಬಣ್ಣ ಬಯಲಿಗೆ ಬಂದಿದ್ದು, ಸೋಲಿನ ಭೀತಿಯಿಂದಾಗಿ ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಜಾತಿ ರಾಜಕಾರಣ ಮಾಡುತ್ತಿದ್ದು, ಜಾತಿ ಉಪಜಾತಿ ಎಂಬ ವಿಷ ವೀಜ ಬಿತ್ತುವಂತಹ ಕೀಳು ಮಟ್ಟದ ವಾಮಮಾರ್ಗ ಹಿಡಿದಿದ್ದಾರೆಂದು ಕಿಡಿ ಕಾರಿದರು.
ಲೋಕೇಶ್ವರ್ಗೆ ಬೆಂಬಲ: ಮಾಜಿ ಶಾಸಕ ಹಾಗೂ ಕೆಜಿಪಿ ಮುಖಂಡ, ನಂಜಾಮರಿ ಮಾತನಾಡಿ ಬಿ.ಎಸ್.ವೈ ಋಣ ತೀರಿಸಲು 6 ವರ್ಷ ಇದ್ದ ಅಧಿಕಾರಕ್ಕೆ ರಾಜಿನಾಮೆ ನೀಡಿ ಲೋಕೇಶ್ವರ ಕೆಜೆಪಿ ಅಭ್ಯರ್ಥಿಯಾಗಿ ತಾಲೂಕಿಗೆ ಬಂದಿದ್ದು, ನಾವೆಲ್ಲ ಅವರ ಬೆಂಬಲಕ್ಕೆ ನಿಂತಿದ್ದೇವೆ. ವಿಶ್ವಾಸ ದ್ರೋಹ ಮಾಡಿದ ಬಿ.ಸಿ.ನಾಗೇಶ್ ಅವರ ಕೀಳುಮಟ್ಟದ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಬೇಕೆಂದರು.   ತೆಂಗಿನಕಾಯಿಗೆ ಮತ ನೀಡಿ ಬಹುಮತದಿಂದ ಲೋಕೇಶ್ವರರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
 ಕಾರ್ಯಕ್ರಮಕ್ಕೂ ಮುನ್ನ ನಗರದ ಟಿ.ಬಿ.ಸರ್ಕಲ್ನಿಂದ ಪ್ರಾರಂಭವಾದ ಕೆಜೆಪಿ ಬೃಹತ್ ರೋಡ್ ಶೋ ನಗರದೇವತೆ ಶ್ರೀ ಕೆಂಪಮ್ಮ ದೇವಾಲಯದಲ್ಲಿ ಸಮಾವೇಶಗೊಂಡಿತು.  ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಘುಪತಿ, ನಗರಾಧ್ಯಕ್ಷ ನಾಸಿರ್ ಖಾನ್, ಅಹಿಂದ ಮುಖಂಡ ತರಕಾರಿ ನಾಗರಾಜು, ಕರಡಿ ದೇವರಾಜು, ನಗರಸಭಾ ಮಾಜಿ ಅಧ್ಯಕ್ಷ ಆರ್.ಡಿ. ಬಾಬು ಸೇರಿದಂತೆ 10ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement