ಕ್ಷೇತ್ರಕ್ಕೆ ಕಾಲಿಡದ ನವರಸ ನಾಯಕ ಜಗ್ಗೇಶ್
ಕ.ಪ್ರ.ವಾರ್ತೆ ತುರುವೇಕೆರೆ ಮೇ 2
ಭಾರತೀಯ ಜನತಾ ಪಕ್ಷದ ಸ್ಟಾರ್ ಕ್ಯಾಂಪೈನರ್ ನವರಸ ನಾಯಕ, ಹಾಲಿ ವಿಧಾನಪರಿಷತ್ ಸದಸ್ಯ,
ಕೆಎಸ್ಆರ್ಟಿಸಿ ಉಪಾಧ್ಯಕ್ಷ ಜಗ್ಗೇಶ್ ಈ ಕ್ಷೇತ್ರಕ್ಕಿನ್ನೂ ಬಿಜೆಪಿ ಪರವಾಗಿ ಪ್ರಚಾರ ಮಾಡಲು ಬಂದೇ ಇಲ್ಲ. ಕಳೆದ 5 ವರ್ಷಗಳ ಹಿಂದೆ ಇದೇ ಜಗ್ಗೇಶ್ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸುಮಾರು 48 ಸಾವಿರ ಮತಗಳಿಸಿ ಜಯಗಳಿಸಿದ್ದರು.
ಗೆದ್ದ ಒಂದೆರಡು ತಿಂಗಳೊಳಗೇ ಆಪರೇಷನ್ ಕಮಲಕ್ಕೆ ಸಿಲುಕಿ ಬಿಜೆಪಿ ಸೇರಿದರು. ಆ ವೇಳೆ ಕ್ಷೇತ್ರದ ಜನರ ಆಕ್ರೋಶಕ್ಕೂ ಈಡಾಗಿದ್ದರು. ತದ ನಂತರದ ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದ ಈಗಿನ ಹಾಲಿ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಅವರನ್ನೇ ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು.
ಆ ವೇಳೆ ಕ್ಷೇತ್ರದ ಹಲವಾರು ಕಡೆ ಸಚಿವ ಆರ್.ಅಶೋಕ್ರೊಂದಿಗೆ ಬಂದಿದ್ದ ಜಗ್ಗೇಶ್ ಸಾಕಷ್ಟು ಪ್ರಚಾರವನ್ನೂ ಮಾಡಿ ಹೋಗಿದ್ದರು ಎಂಬದು ಇತಿಹಾಸ.
ಮನಸ್ಸು ಮಾಡಿಲ್ಲ: ಆದರೆ ಆಗ ಜೆಡಿಎಸ್ನ ಎಂ.ಟಿ.ಕೃಷ್ಣಪ್ಪ ಗೆದ್ದಿದ್ದರು. ಈಗಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ರಾಜ್ಯದ ವಿವಿಧ ಕಡೆ ಪ್ರಚಾರಕ್ಕೆ ತೆರಳುವ ಜಗ್ಗೇಶ್ ತಮ್ಮ ಸ್ವಕ್ಷೇತ್ರಕ್ಕೆ ಏಕೋ ಬರಲು ಇನ್ನೂ ಮನಸ್ಸು ಮಾಡಿಲ್ಲ.
ಕಳೆದ ಮರು ಚುನಾವಣೆ ನಂತರ ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬೆಳೆಸಬೇಕೆಂಬ ದೃಷ್ಟಿಯಿಂದ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಅವರಿಗೆ ಹಾಗೂ ಜಗ್ಗೇಶ್ ಅವರಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಅವರ್ಯಾರೂ ಸಹ ಪಕ್ಷದ ಬೆಳವಣಿಗೆಗೆ ಪ್ರಯತ್ನಿಸಲೇ ಇಲ್ಲ. ಅತ್ತ ಜಗ್ಗೇಶ್ ಸುಳಿಯಲೂ ಇಲ್ಲ.
ಇತ್ತ ಎಂ.ಡಿ.ಲಕ್ಷ್ಮೀನಾರಾಯಣ್ ಬಿಜೆಪಿ ತ್ಯಜಿಸಿ ಕೆಜೆಪಿ ಸೇರಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಅನಾಥವಾಗಿತ್ತು. ಸಿಕ್ಕ ಅವಕಾಶದಲ್ಲಿ ಪಿಎಲ್ಡಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಟಿ.ಎಸ್.ಬೋರೇಗೌಡ ಪಕ್ಷವನ್ನು ಮುನ್ನೆಡೆಸಿಕೊಂಡು ಸಾಗಿದ್ದರು.
ನೂತನ ಸಾರಥಿ: ಈಗ ಬಿಜೆಪಿಗೆ ನೂತನ ಸಾರಥಿಯನ್ನು ನೀಡಲಾಗಿದೆ. ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ.ಕೆ.ಸೋಮಣ್ಣ ಈ ಪಕ್ಷದ ಹುರಿಯಾಳು. ಸೋಮಣ್ಣ ಬಿಜೆಪಿಯ ಸಾಂಪ್ರದಾಯಿಕ ಮತಗಳೊಂದಿಗೆ ತಮ್ಮ ವರ್ಚಿಸ್ಸಿನಿಂದ ಪಕ್ಷವನ್ನು ಸರಿದಾರಿಗೆ ಕೊಂಡಯ್ಯಬಹುದು.
ಆದರೆ ಈ ಚುನಾವಣೆ ವೇಳೆ ಇದೇ ಕ್ಷೇತ್ರದವರೂ ಇಲ್ಲಿಂದಲೇ ಒಮ್ಮೆ ಗೆದ್ದು ಹೋಗಿರುವ ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನವನ್ನೂ ಹೊಂದಿರುವ ಜಗ್ಗೇಶ್ ಇತ್ತ ಸುಳಿಯದೇ ಇರುವುದು ಚರ್ಚೆ ವಿಷಯವಾಗಿದೆ.
ಕಳೆದ ಹತ್ತಾರು ದಿನಗಳಿಂದ ಬಿಜೆಪಿಯ ಯಾವುದೇ ರಾಜ್ಯ ನಾಯಕರು ಇತ್ತ ಮುಖ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಆಗಮಿಸುವರು ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಬಿಸಿಲಿನಲ್ಲಿ ಕಾದಿದ್ದೇ ಬಂದ ಭಾಗ್ಯ.
ಕನಿಷ್ಠ ಈ ಕ್ಷೇತ್ರದವರೇ ಆಗಿರುವ ಜಗ್ಗೇಶ್ ತಮ್ಮ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕೆ ಆಗಲೀ ಬಂದು ಪ್ರಚಾರ ಕಾರ್ಯ ಮಾಡಿದ್ದರೆ ತಮ್ಮ ಪಕ್ಷಕ್ಕೆ ಗೌರವವನ್ನಾದರೂ ತರಬಹುದಿತ್ತು.
ಪಾಪ ಈ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಈಗಲೂ ಜಗ್ಗೇಶ್ ಅವರ ಬರುವಿಕೆಯನ್ನು ನಿರೀಕ್ಷಿಸಿದ್ದಾರೆ.