ಗೊಲ್ಲರಹಟ್ಟಿ ಅಭಿವೃದ್ಧಿಗೆ ವಿಶೇಷ ಆದ್ಯತೆ: ಸುರೇಶ್ ಗೌಡ
ಕ.ಪ್ರ.ವಾರ್ತೆ ತುಮಕೂರು ಮೇ 2
ತಮ್ಮ ಅಧಿಕಾರವಧಿಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಯೋಜನೆ ಅನುಷ್ಠಾನ ಮಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ. ಸುರೇಶ್ಗೌಡ ತಿಳಿಸಿದರು.
ಅವರು ನೆಲಹಾಳ್, ಸೋರೇಕುಂಟೆ ಗ್ರಾ.ಪಂ. ವ್ಯಾಪ್ತಿಯ ಲಿಂಗನಹಳ್ಳಿ ಪಾಲಿಹಟ್ಟಿ, ಲಕ್ಕನಹಟ್ಟಿ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಿ ಮಾತನಾಡಿದರು.
ಗೊಲ್ಲ ಸಮುದಾಯ ನಂಬಿಕೆ ಮತ್ತು ವಿಶ್ವಾಸಕ್ಕೆ ಮಹತ್ವ ನೀಡುವ ಸಮುದಾಯವಾಗಿದ್ದು ಈ ಕ್ಷೇತ್ರದಲ್ಲಿ ನಿಮ್ಮ ಮನೆಯ ಮಗನಾಗಿ ಗೊಲ್ಲರಹಟ್ಟಿಗಳಲ್ಲಿ ಈಗಾಗಲೇ ಲಕ್ಕನಹಟ್ಟಿ, ಪಾಲಿಹಟ್ಟಿ, ಚನ್ನೇನಹಳ್ಳಿ, ಕುರಿಕೆಂಪನಹಳ್ಳಿ, ಸೋರೇಕುಂಟೆ, ಮಲ್ಲೆನಹಳ್ಳಿ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಗುಡಿಸಲು ರಹಿತ ಗೊಲ್ಲರಹಟ್ಟಿಗಳನ್ನು ಮಾಡಲು 2 ಸಾವಿರ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಹಣದಿಂದ ಅಳತೆ: ಜೆಡಿಎಸ್ ಅಭ್ಯರ್ಥಿ ಈ ಕ್ಷೇತ್ರದ ಮತದಾರರನ್ನು ಹಣದಿಂದ ಅಳತೆ ಮಾಡುತ್ತಿದ್ದಾರೆ. ಈ ರೀತಿಯ ನಯ ವಂಚಕರ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ನೀವು ನೀಡುವ ಮತ 5 ವರ್ಷದ್ದಾಗಿರುತ್ತದೆ. ನಿಮ್ಮ ಮನೆ ಬಾಗಿಲಿಗೆ ಸೌಲಭ್ಯವನ್ನು ನೀಡಿರುವ ಬಿಜೆಪಿ ಸುರೇಶ್ ಗೌಡರಿಗೆ ಮತ ನೀಡಿ ಎಂದರು.
ಈ ಭಾಗದ ಗ್ರಾಮಗಳನ್ನು ರಾಷ್ಟ್ರದಲ್ಲೇ ಮಾದರಿಯಾಗಿ ಮಾಡಿ ತೋರಿಸುತ್ತೇನೆ ಎಂದು ವಾಗ್ದಾನ ಮಾಡಿದರು. ಬಿಜೆಪಿ ಸರ್ಕಾರ ಗಾಂಧೀಜಿಯವರ ಕನಸು ನನಸು ಮಾಡುವ ದಿಕ್ಕಿನಲ್ಲಿ ಕಾರ್ಯ ಮಾಡಿದ್ದು ಇದರ ಭಾಗವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಂದ 889 ಕೋಟಿ ರು. ಗಳ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವು ಎಂದರು.
ತಿಮ್ಮರಾಜನಹಳ್ಳಿ ಪಂ ಅಧ್ಯಕ್ಷ ಜಯರಾಂ ಪ್ರಸಾದ್, ಲಿಂಗನಹಳ್ಳಿಯ ಸೋಮು ವೀರಾಚಾರ್, ಶಿವಲಿಂಗಯ್ಯ ಯೋಗೀಶ್, ನಾಗರಾಜ್ ಬಸವರಾಜ್ ಜಡಿಯಪ,್ಪ ಶಿವಣ್ಣ, ಬೋಗಣ್ಣ, ಬಾಳೆಎಲೆ ಮೂರ್ತಿ, ಚಂದ್ರಣ್ಣ ಮಂಜಣ್ಣ ಕೃಷ್ಣಮೂರ್ತಿ, ಲಾಯರ್ ವೀರಣ್ಣ, ನರಸಿಂಹಯ್ಯ, ಪಾಪಣ್ಣ, ಪುಟ್ಟಯ್ಯ, ಚಿಕ್ಕರಂಗಯ್ಯ, ಬಸವರಾಜು, ನೆಲಹಾಲ್, ಅಂಗಡಿಮೂರ್ತಿ ಉಪಸ್ಥಿತರಿದ್ದರು.