ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಈಗ ಸಂಪೂರ್ಣ ಪರಿಶುದ್ಧ ಮನೆ

Rashmi Kasaragodu
Updated On : 3 May 2013, 12:24 pm

ಕ.ಪ್ರ. ವಾರ್ತೆ  ಕುಣಿಗಲ್  ಮೇ 2
ಪರಿಶುದ್ಧವಾದ ಬಿಜೆಪಿ ಮನೆಯನ್ನು ಅಶುದ್ಧಗೊಳಿಸಿದ್ದವರೆಲ್ಲಾ ಮನೆಯಿಂದ ಹೊರಗೆ ಹೊಗಿದ್ದು, ಬಿಜೆಪಿ ಸಂಪೂರ್ಣ ಪರಿಶುದ್ಧ ಮನೆಯಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಬಿಜೆಪಿ ಮುಖಂಡ, ಮುಖ್ಯಮಂತ್ರಿ  ಚಂದ್ರು ಕರೆ ನೀಡಿದರು.
ಗುರುವಾರ, ತಾಲೂಕಿನ ವಿವಿಧೆಡೆಗಳಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಪರ ರೋಡ್ ಶೋ ಮೂಲಕ ಮತಯಾಚಿಸಿ, ಪಟ್ಟಣದ ಹುಚ್ಚಮಾಸ್ತಗೌಡ ಸರ್ಕಲ್‌ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕಳೆದ ಅರವತ್ತು ವರ್ಷಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಮಾಡಿರದ ಸಾಧನೆಯನ್ನು ಬಿಜೆಪಿ ಸರ್ಕಾರ ಕೇವಲ ಐದು ವರ್ಷಗಳಲ್ಲಿ ಸಾಧಿಸಿದೆ. ಸಾಧನೆಯ ಮೇರುಪರ್ವತದ ನಡುವೆಯೂ, ಕೆಲ ಸಣ್ಣಪುಟ್ಟ ಆರೋಪಗಳು ಕೇಳಿಬಂದು ಸರ್ಕಾರಕ್ಕೆ ಸ್ವಲ್ಪಮಟ್ಟಿನ ಮುಜುಗರವಾಗಿತ್ತು ಎಂದರು.
ಕುಣಿಗಲ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದಂತ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ನಂತರ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಹಿಂದುಳಿದಿದೆ. ಹಾಲಿ ಶಾಸಕರು ಸಾಕಷ್ಟು ಅಭಿವೃದ್ಧಿಗೊಳಿಸುವ ಸಾಧ್ಯತೆ ಇದ್ದರೂ ಅವರು, ಅಧಿಕಾರ ಅನುಭವಿಸಿದರೇ ಹೊರತು ಕ್ಷೇತ್ರದ ಅಭಿವೃದ್ಧಿಗೆ ಕಾಳಜಿವಹಿಸಲಿಲ್ಲ. ಕಳೆದ ಬಾರಿ ಡಿ.ಕೃಷ್ಣಕುಮಾರ್ ಸ್ವಲ್ಪ ಅಂತರದಲ್ಲಿ ಸೋತರೂ ಧೃತಿಗೆಡದೆ, ಜನಪರ ಸಮಸ್ಯೆಗಳನ್ನು ಬಗೆಹರಿಸಲು ಜನತೆಯ ಮಧ್ಯವಿದ್ದು, ಜನಪ್ರಿಯರಾಗಿದ್ದಾರೆ. ಕ್ಷೇತ್ರದ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಬಿಜೆಪಿಯಿಂದ ಮಾತ್ರ ಸಾಧ್ಯ: ಅಭ್ಯರ್ಥಿ ಡಿ.ಕೃಷ್ಣಕುಮಾರ್, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯವಾಗುತ್ತದೆ. ಈಗಾಗಲೆ 15 ವರ್ಷ ಶಾಸಕರಾಗಿ, ಸಚಿವರಾಗಿ ಯಾವುದೇ ಅಭಿವೃದ್ಧಿ ಮಾಡದ ಜೆಡಿಎಸ್ ಅಭ್ಯರ್ಥಿ, ಹಾಲಿ ಶಾಸಕರಾಗಿದ್ದು ಕ್ಷೇತ್ರದ ಅಭಿವೃದ್ಧಿಗೆ ಕಾಳಜಿವಹಿಸದೆ ನಿರ್ಲಕ್ಷ್ಯವಹಿಸಿದ ಕಾಂಗ್ರೆಸ್ ಅಭ್ಯರ್ಥಿಯಿಂದ ಯಾವುದೇ ಮಹತ್ವದ್ದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ಬೆಂಬಲಿಸಿ, ತಾಲೂಕು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದರು.
ತಾಲೂಕು ಅಧ್ಯಕ್ಷ ಚಿಕ್ಕರಾಮಯ್ಯ, ಪ್ರಮುಖರಾದ ಕೆ.ಎಂ.ತಿಮ್ಮಪ್ಪ, ನಟರಾಜು, ನಡೇಮಾವಿನಪುರ ರಂಗಸ್ವಾಮಿ,ನಂಜೇಗೌಡ, ಬಲರಾಮ, ಕೃಷ್ಣ, ಕುಮಾರಗೌಡ, ವರಲಕ್ಷ್ಮೀ, ಸುರೇಶ್, ಸೇರಿದಂತೆ  ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement