ವಿರೋಧ ಪಕ್ಷ ಸೃಷ್ಟಿಸಿರುವ ಗೊಂದಲಕ್ಕೆ ಕಿವಿಗೊಡ ಬೇಡಿ
ಕ.ಪ್ರ. ವಾರ್ತ್ಣೆ ಕೊರಟಗೆರೆ ಮೇ 2
ವಿರೋಧ ಪಕ್ಷದವರು ಕುರುಬ ಮತ್ತು ದಲಿತರ ನಡುವೆ ಸೃಷ್ಟಿಸಿರುವ ಗೊಂದಲಕ್ಕೆ ಕಿವಿಗೊಡಬಾರದು ಎಂದು ಸಂಸದ ಎಚ್. ವಿಶ್ವನಾಥ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಿಂದುಳಿದ ವರ್ಗಗಳಾದ ಕುರುಬ ಮತ್ತು ದಲಿತ ಸುಮುದಾಯದ ನಡುವೆ ಕೊರಟಗೆರೆ ಮತ್ತು ವರಣಾ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಗೊಂದಲ ವಿರೋಧ ಪಕ್ಷದವರ ಹುನ್ನಾರವಾಗಿದೆ ಎಂದರು.
ದಲಿತ ಸಮುದಾಯದವರು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಸಂಪೂರ್ಣವಾದ ಬೆಂಬಲದೊಂದಿಗೆ ಅವರ ಗೆಲವಿಗೆ ಕಂಕಣ ಕಟ್ಟಿ ನಿಂತಿದ್ದು ಕ್ಷೇತ್ರದೆಲ್ಲೆಡೆ ದಲಿತರು ಒಗ್ಗಟ್ಟಿನಿಂದ ಸಿದ್ದರಾಮಯ್ಯನವರನ್ನು ಗೆಲ್ಲಿಸಲಿದ್ದು ಅದೇ ರೀತಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ. ಪರಮೇಶ್ವರ್ ಅವರಿಗೆ ಕುರುಬ ಸಮಾಜವು ಹಿಂದಿನ ಚುನಾವಣೆಯಲ್ಲಿ ಸಂಪೂರ್ಣವಾಗಿ ಬೆಂಬಲಿಸಿದಂತೆ ಈ ಬಾರಿಯೂ ಗೆಲ್ಲಿಸಲು ಕಂಕಣಬದ್ಧರಾಗಿದ್ದು ಕೆಲ ಕಿಡಿಗೇಡಿಗಳ ಮಾತಿಗೆ ಸಮುದಾಯವು ಕಿವಿಗೊಡಬಾರದೆಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸ್ಪರ್ಧಿಸಿರುವ ಕೊರಟಗೆರೆ ಕ್ಷೇತ್ರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಿರುವ ವರುಣಾ ಕ್ಷೇತ್ರ ರಾಜ್ಯದಲ್ಲೇ ಪ್ರತಿಷ್ಠಿತ ಕ್ಷೇತ್ರಗಳಾಗಿದ್ದು ವಿರೋಧ ಪಕ್ಷದವರು ಈ ಎರಡೂ ನಾಯಕರನ್ನು ಸೋಲಿಸಲು ಇಲ್ಲ ಸಲ್ಲದ ಗೊಂದಲಗಳನ್ನು ಸೃಷ್ಟಿಸಿ ಕ್ಷುಲ್ಲಕ ಜಾತಿ ರಾಜಕೀಯದೊಂದಿಗೆ ತುಳಿತಕ್ಕೆ ಒಳಗಾಗಿರುವ ಮುಗ್ಧ ಮನಸ್ಸುಗಳಿಗೆ ಇಲ್ಲದ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಸಿಎಂ ಪದವಿ ಆಕಾಂಕ್ಷಿಗಳೇ: ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವಾಗಿದ್ದು ಸಿದ್ದರಾಮಯ್ಯ ಮತ್ತು ಡಾ.ಜಿ. ಪರಮೇಶ್ವರ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರೆಲ್ಲರೂ ಮುಖ್ಯಮಂತ್ರಿ ಪದವಿ ಆಕಾಂಕ್ಷಿಗಳೆ. ಆದರೆ ಮುಖ್ಯಮಂತ್ರಿ ಆಯ್ಕೆ ಪಕ್ಷದ ಸಿದ್ಧಾಂತದಂತೆ ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಿ ಆಯ್ಕೆಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಜೆಡಿಎಸ್‌ನಿಂದ ದಲಿತರಿಗೆ 20 ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ ಅವರು ಜೆಡಿಎಸ್ ಪಕ್ಷ ನೆಲೆಯಿಲ್ಲದ ಕಡೆ ಹಾಗೂ ನೀಡಲೇಬೇಕಾದ ಅನಿವಾರ್ಯ ಇರುವ ಕಡೆ ಟಿಕೆಟ್ ನೀಡಿ ದಲಿತರ ಕಣ್ಣಿಗೆ ಮಣ್ಣು ಎರಚುವ ಕಾರ್ಯ ಮಾಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕುರುಬ ಸಮಾಜದ ಮುಖಂಡ ಶಿವಮೂರ್ತಿ, ಮಡಿವಾಳ ಸಂಘದ ರಾಜ್ಯಾಧ್ಯಕ್ಷ ರಘು, ನಾರಾಯಣಸ್ವಾಮಿ, ಕೆಂಪರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾರಪ್ಪ, ವೀರೇಂದ್ರ ಪ್ರಸಾದ್, ಗುರುಪ್ರಸಾದ್, ರಂಗಧಾಮಯ್ಯ, ನಾಗಭೂಷಣ್, ಕೆ.ಆರ್. ಓಬಳರಾಜು, ಸೇರಿದಂತೆ ಇನ್ನಿತರರು ಹಾಜರಿದ್ದರು.