ಕಾಂಗ್ರೆಸ್, ಬಿಜೆಪಿ ವಿರುದ್ಧ ಕೆಜೆಪಿ ಅಭ್ಯರ್ಥಿ ಆಕ್ರೋಶ
ಕ.ಪ್ರ. ವಾರ್ತೆ ತಿಪಟೂರು ಮೇ 3
ಚುನಾವಣೆ ಸಮಯದಲ್ಲಿ ಮತದಾರನ ಮನವೊಲಿಸುವಲ್ಲಿ ತಾಲ್ಲೂಕಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ವಿಫಲವಾಗಿರುವುದಲ್ಲದೆ ದುರ್ಮಾರ್ಗಕ್ಕೆ ಹೆಚ್ಚು ಒತ್ತು ನೀಡಿ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಿ ಮತಗಿಟ್ಟಿಸಲು ಸಾಹಸ ಪಡುತ್ತಿರುವುದು ನಾಚಿಕೆಗೇಡು ಎಂದು ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೆಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಚುನಾವಣೆಗೆ ಕ್ಷಣಗಣನೆಯಲ್ಲಿರುವ ಸಂದರ್ಭದಲ್ಲಿ ಇಲ್ಲಿನ ಬಿಜೆಪಿ ಮತ್ತು ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಾ ಕೆಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವುದು ಖಂಡನೀಯ. ಮತಾದರರನ್ನು ಓಲೈಸುವ ಮದ್ಯ, ಹಣ ಹಂಚಿಕೆಯಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಈಗಾಗಲೆ ಮದ್ಯ, ಕೋಳಿ ನೀಡಿ ಮತ ಕೇಳುತ್ತಿರುವುದಕ್ಕೆ ನಾಚಿಕೆಯಾಗಬೇಕು. ಇದೇ ರೀತಿ ಕಾಂಗ್ರೆಸ್ ಕೂಡ ವಾಮಮಾರ್ಗ ಅನುಸರಿಸಿ ತೋಟದ ಮನೆಗಳಲ್ಲಿ ಮದ್ಯ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಇದರಿಂದ ಬಿಜೆಪಿ, ಕಾಂಗ್ರೆಸ್ ಅಕ್ರಮಗಳಿಂದ ಚುನಾವಣೆಯಲ್ಲಿ ಮತದಾರ ಮನವೊಲಿಸಲು ಮುಂದಾಗಿರುವುದು ಸಾಬೀತಾಗಿದೆ ಎಂದರು.
ಬುಧವಾರ ನಡೆದ ಕೆಜೆಪಿ ರೋಡ್ ಶೋ ನಿಂದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮುಖಂಡರು ಕಾರ್ಯಕರ್ತರಲ್ಲಿ ಮೈ ನಡುಕವುಂಟಾಗಿ ಸುಳ್ಳು ಕರಪತ್ರ ಹಂಚಿರುವುದು ಕಂಡು ಬರುತ್ತಿದೆ. ಇದಕ್ಕೆ ಚುನಾವಣಾಧಿಕಾರಿಗಳು ಮುಂದಿನ ದಿನಗಳಲ್ಲಿ ಕಠಿಣ ಕ್ರಮಕೈಗೊಂಡು ವಿಪಕ್ಷಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಲಿದ್ದಾರೆ ಎಂದು ಪ್ರತಿಪಾದಿಸಲಿದ್ದಾರೆ.
ಕೆಜೆಪಿ ಸಂಚಾಲಕ ಟಿ.ಆರ್.ರಘುಪತಿ, ಕಾರ್ಯದರ್ಶಿ ಮಲ್ಲೇಶ್, ಮುಖಂಡರಾದ ಮುನ್ನ, ಗಿರೀಶ್, ಮಾರನೆಗೆರೆ ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.