'ಕೆಜೆಪಿಗೆ ಎಲ್ಲ ವರ್ಗದ ಬೆಂಬಲ'
ತುಮಕೂರು: ತುಮಕೂರು ನಗರದಲ್ಲಿ ಕೆಜೆಪಿಗೆ ಪಕ್ಷಾತೀತ ಬೆಂಬಲ ಸಿಕ್ಕಿದ್ದು, ತಮಗೆ ಜಯ ಖಚಿತ ಎಂದು ತುಮಕೂರು ನಗರ ಕೆಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಲ್ಲ ವರ್ಗದ ಜನತೆಯನ್ನು ಭೇಟಿ ಮಾಡಿದ್ದೇವೆ. ಜನ ಬೆಂಬಲ ತಮಗಿದೆ. ಈ ಬಾರಿ ತುಮಕೂರು ನಗರದಲ್ಲಿ ಬದಲಾವಣೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ನಗರಸಭೆ ಚುನಾವಣೆ ವೇಳೆ ನೀಡಿದ್ದ ಪ್ರಣಾಳಿಕೆಯೇ ಈ ಬಾರಿ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಾಗಿದೆ ಎಂದರು.
ಆರೋಪ ಸುಳ್ಳು: ಸಚಿವ ಸೊಗಡು ಶಿವಣ್ಣ, ಸಂಸದ ಜಿ.ಎಸ್.ಬಸವರಾಜು ವಿರುದ್ದ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಪಂಚಾಕ್ಷರಯ್ಯ ಹಾಗೂ ಅಳಿಯ, ಸೊಸೆ ಈ ಹಿಂದೆಯೇ ಕೆಜೆಪಿ ಸೇರಿದ್ದಾರೆ. ಪಂಚಾಕ್ಷರಯ್ಯ ಹಾಗೂ ಕುಟುಂಬದವರಿಗೆ ಸಂಸದರು ಬೆದರಿಕೆ ಹಾಕಿಲ್ಲ. ಸಂಸದರು ಯಾರ ಮನೆಯನ್ನೂ ಒಡೆಯುವ ಕೆಲಸ ಮಾಡಿಲ್ಲ. ಸೊಗಡು ಶಿವಣ್ಣ ಇಲ್ಲದ ಹೇಳಿಕೆ ನೀಡುವ ಮೂಲಕ ಅಗ್ಗದ ಪ್ರಚಾರ ಪಡೆಯುತ್ತಿದ್ದಾರೆ. ಜಾತಿಗಳನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಹೆಬ್ಬಾಕ ರವಿ ಆಕ್ರೋಶ ವ್ಯಕ್ತಪಡಿಸಿದರು.