ದುಷ್ಕರ್ಮಿಗಳ ಪತ್ತೆಗೆ ಆಗ್ರಹ
ಶಿರಾ: ಇಲ್ಲಿನ ಪಕ್ಷೇತರ ಅಭ್ಯರ್ಥಿ ಡಿ.ಎಂ.ಈರಣ್ಣ ಅವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಲ್ಲೆ ನಡೆಸಿ, ತುಮಕೂರು ಸಮೀಪದ ನಂದಿ ಹಳ್ಳಿಯ ರೇಲ್ವೆ ಹಳಿ ಮೇಲೆ ಬಿಸಾಡಿ ಹೋಗಿದ್ದು, ಘಟನೆಗೆ ಸಂಬಂಧಪಟ್ಟಂತೆ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸದಿದ್ದರೆ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಶಿರಾ ತಾಲೂಕು ಯಾದವ ಯುವ ವೇದಿಕೆ ಎಚ್ಚರಿಸಿದೆ. ಪಟ್ಟಣದಲ್ಲಿ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವ ವೇದಿಕೆಯ ಅಧ್ಯಕ್ಷ ಸಂಪತ್ಕುಮಾರ್, ಉಪಾಧ್ಯಕ್ಷ ಸೋರೆಕುಂಟೆ ನಾಗರಾಜು, ಮಂಜುನಾಥ್, ಅಜ್ಜಣ್ಣ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ರಾಜಕೀಯ ಆಸಕ್ತಿಯಿಂದ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದುಡಿದು ಕ್ಷೇತ್ರದ ಜನಸೇವೆ ಮಾಡಲು ಸ್ಪರ್ಧಿಸಿರುವ ಈರಣ್ಣ ಅವರಿಗೆ ಸಿಗುತ್ತಿರುವ ಪ್ರತಿಕ್ರಿಯೆ ಸಹಿಸಲಾಗದ ಗುಂಪೊಂದು ಹಲ್ಲೆ ನಡೆಸಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಿ, ಸತ್ಯಾಸತ್ಯತೆ ಬಯಲು ಮಾಡುವಂತೆ ಆಗ್ರಹಿಸಿದರು.