ಮನೆಬಾಗಿಲಿಗೇ ಗುರುತಿನ ಚೀಟಿ: ಡಾ.ಕೆ.ಜಿ.ಅನೂಪ್
ಕ.ಪ್ರ.ವಾರ್ತೆ ಕುಣಿಗಲ್ ಮೇ.3
ಮೇ.5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಮನೆ ಬಾಗಿಲಿಗೆ ಗುರುತಿನ ಚೀಟಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಚುನವಣಾಧಿಕಾರಿ ಡಾ.ಕೆ.ಜಿ.ಅನೂಪ್ ತಿಳಿಸಿದರು.
ಈ ಸಂಬಂಧ ಪಟ್ಟಣದಲ್ಲಿ ಶುಕ್ರವಾರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಗದ ಸೂಚನೆಯಂತೆ ಅಯಾ ಮತಗಟ್ಟೆ ಅಧಿಕಾರಿಗಳು, ಮತದಾರರಿಗೆ, ಮತಚಲಾವಣೆ ಮಾಡಲು ಗುರುತಿನ ಚೀಟಿಯನ್ನು ಮನೆಬಾಗಿಲಿಗೆ ಹೋಗಿ ವಿತರಿಸುತ್ತಿದ್ದು, ಇದರ ಹೊರತಾಗಿ ಮತಗಟ್ಟೆಯಿಂದ ಸುರಕ್ಷತೆ ಪ್ರದೇಶದ ಹೊರಗಡೆಯೂ ಗುರುತಿನ ಚೀಟಿ ನೀಡಲು ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಸಂತೇಮಾವತ್ತೂರು, ಪಡುವಗೆರೆ, ಬಸವಮತ್ತೀಕೆರೆ, ಅಮೃತೂರು ಹಾಗೂ ಪಲ್ಲೆರಾಯನಹಳ್ಳಿಯ ಐದು ಸೂಕ್ಷ್ಮ ಮತಗಟ್ಟೆಗಳಲ್ಲಿ ಆನ್‌ಲೈನ್ ವೆಬ್ ಕ್ಯಾಮೆರಾಗಳನ್ನು ಅಳವಡಿಸಿ, ರಾಜ್ಯ ಹಾಗೂ ಕೇಂದ್ರ ಆಯೋಗಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಇದಲ್ಲದೆ ಮುವತ್ತು ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು. ತಾಲೂಕಿನಲ್ಲಿ 16 ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಗುರುವಾರ ರಾತ್ರಿ ಜಲಧಿಗೆರೆ ಗ್ರಾಮದ ಕೂಲಿಕಾರ್ಮಿಕಳಾದ ವಿಜಯಲಕ್ಷ್ಮೀ ಎಂಬುವವರ ಮನೆಯಲ್ಲಿ ಸುಮಾರು 35 ಸಾವಿರ ರೂ.ಮೌಲ್ಯದ 16ಬಾಟಲ್ ಬ್ಲಾಕ್‌ಲೇಬಲ್, ಚಿವಾಸ್‌ರೀಗಲ್,ಬ್ಲಾಕ್‌ಡಾಗ್ ಸೇರಿದಂತೆ ಇತರೆ ದುಬಾರಿ ಮದ್ಯ ದಾಸ್ತಾನು ದೊರೆತಿದ್ದು, ಪ್ರಕರಣ ದಾಖಲಿಸಿಲಾಗಿದೆ ಎಂದರು.