ಮುಕ್ತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜು
ಕ.ಪ್ರ.ವಾರ್ತೆ ತುಮಕೂರು ಮೇ 3
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸಜ್ಜಾಗಿದೆ.
ಅತಿ ಸೂಕ್ಷ್ಮ ಮತದಾನ ಕ್ಷೇತ್ರಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮೈಕ್ರೋ ಅಬ್ಸರ್ವರ್, ಹ್ಯಾಂಡಿ ಕ್ಯಾಮೆರಾ, ವಿಡಿಯೋ ಗ್ರಾಫ್ ವ್ಯವಸ್ಥೆಗೊಳಿಸಲಾಗಿದ್ದು, ಸಿಪಿಎಂಎಫ್ ಅಥವಾ ಸ್ಥಳೀಯ ಪೋಲಿಸ್ ಸಿಬ್ಬಂದಿಯನ್ನು ಇಂತಹ ಮತದಾನ ಕೇಂದ್ರಗಳಿಗೆ ಭದ್ರತೆ ಹಿನ್ನಲೆಯಲ್ಲಿ ನಿಯೋಜಿಸಲಾಗಿದೆ.
ಈ ವ್ಯವಸ್ಥೆಯಿಂದಾಗಿ ಮತದಾರ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಇದೇ ರೀತಿ ಆಯ್ದ ಕೆಲವು ಮತದಾನ ಕೇಂದ್ರಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ನಡೆಯುವ ಪೂರ್ಣ ಪ್ರಕ್ರಿಯೆಯನ್ನು ವೆಬ್ಕ್ಯಾಸ್ಟಿಂಗ್ ಮುಖಾಂತರ ನಿರಂತರವಾಗಿ ಗಮನಿಸಲು ಅನುವಾಗುವಂತೆ ಜಿಲ್ಲೆಯಲ್ಲಿರುವ ವಲ್ನರಬಲ್ ಮತ್ತು ಕ್ರಿಟಿಕಲ್ ಮತದಾನ ಕೇಂದ್ರಗಳಲ್ಲಿ 57 ಮತ ಕೇಂದ್ರಗಳಲ್ಲಿ ವೆಬ್ಕ್ಯಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.
772 ವಾಹನ ವ್ಯವಸ್ಥೆ: ಮತದಾನ ಸುಸೂತ್ರವಾಗಿ ನಡೆಯಲು ಅನುವಾಗುವಂತೆ 12,508 ಮತಗಟ್ಟೆ ಅಧಿಕಾರಿಗಳನ್ನೊಳಗೊಂಡಂತೆ ಚುನಾವಣಾ ಸಿಬ್ಬಂದಿಯನ್ನು ನೇಮಕಾತಿ ಮಾಡಲಾಗಿದ್ದು, ಇವರನ್ನು ಮತದಾನ ಕೇಂದ್ರಕ್ಕೆ ಕರೆದೊಯ್ಯಲು, ಮತ್ತೆ ಅವರ ವಾಸಸ್ಥಳಗಳಿಗೆ ಹಿಂತಿರುಗುವಂತೆ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಂದ 772 ವಿವಿಧ ರೀತಿಯ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಚುನಾವಣಾ ಸಿಬ್ಬಂದಿಯನ್ನು ಮತದಾನ ಕೇಂದ್ರಗಳಿಗೆ ನೇಮಕಾತಿ ಮಾಡಲು ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಮತ್ತು ಇಬ್ಬರು ಮತಗಟ್ಟೆ ಸಿಬ್ಬಂದಿಯನ್ನು ನೇಮಕಾತಿ ಮಾಡಲಾಗಿದ್ದು, ಇವರು ಯಾವ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ತಿಳಿಸಲಾಗುವುದು.
50 ಚೆಕ್ಪೋಸ್ಟ್: ಚುನಾವಣಾ ಕರ್ತವ್ಯಕ್ಕೆ ನೇಮಕಾತಿಗೊಂಡಿರುವ ಎಲ್ಲಾ ವರ್ಗದ ಸಿಬ್ಬಂದಿಗಳು ಮತದಾನ ಮಾಡಲು ಅನುವಾಗುವಂತೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಮೊದಲನೇ ಮತ್ತು ಎರಡನೇ ಚುನಾವಣಾ ಸಿಬ್ಬಂದಿ ತರಬೇತಿ ಕೇಂದ್ರಗಳಲ್ಲಿ ಫೆಸಿಲಿಟೇಶನ್ ಸೆಂಟರ್ಗಳನ್ನು ಸ್ಥಾಪಿಸಿ ಪೋಸ್ಟಲ್ ಬ್ಯಾಲೆಟ್ ಪೇಪರ್ಗಳನ್ನು ಪಡೆದು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸದರಿ ಕೇಂದ್ರಗಳಲ್ಲಿ ಇವರಿಗೆ ಅಗತ್ಯವಾದ ಮತದಾರರ ಪಟ್ಟಿಯ ವಿವರಗಳನ್ನು ಕ್ರಮಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಚುನಾವಣೆಯನ್ನು ಪಾರದರ್ಶಕವಾಗಿ ಮತ್ತು ಯಾವುದೇ ರೀತಿಯಾದಂತಹ ನಿಯಮ ಬಾಹಿರ ಚಟುವಟಿಕೆಗಳನ್ನು ಹೊರತಾದಂತೆ ಮುಕ್ತ ಚುನಾವಣೆಯನ್ನು ನಡೆಸಲು ಅನುವಾಗುವಂತೆ ಜಿಲ್ಯೆಯಾದ್ಯಂತ 50 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 14 ಚೆಕ್ಪೋಸ್ಟ್ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ ಅಲ್ಲಿಯ ಚಟುವಟಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಈ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವ ಚೆಕ್ಪೋಸ್ಟ್ಗಳನ್ನು ನಿರಂತರವಾಗಿ ಗಮನಿಸಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಚುನಾವಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅನುವಾಗುವಂತೆ 227 ಸೆಕ್ಟೋರಲ್ ಅಧಿಕಾರಿಗಳು, 39 ಪ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನೇಮಕಾತಿ ಮಾಡಲಾಗಿದೆ. ಇದೇ ರೀತಿ ವಿಡಿಯೋ ಸರ್ವೆಲೆನ್ಸ್ ಟೀಮ್ ಅನ್ನು ಸಹ ರಚಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಚುನಾವಣಾ ಸಂಬಂಧದ ಎಲ್ಲಾ ಚಟುವಟಿಕೆಗಳನ್ನು ವಿಡಿಯೋ ರಿಕಾರ್ಡಿಂಗ್ ಮಾಡಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಅನುವಾಗುವಂತೆ ತುಮಕೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಇವರ ಅಧೀನದಲ್ಲಿ ಪ್ರತಿ ತಾಲೂಕಿನಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಚುನಾವಣಾ ನೀತಿ ಸಂಹಿತೆ ಅನುಷ್ಟಾನದ ನೋಡಲ್ ಅಧಿಕಾರಿಗಳಾಗಿ ನೇಮಕಾತಿ ಮಾಡಲಾಗಿದೆ.
ಚುನಾವಣೆಯ ನಂತರ ಮತದಾನ ಎಣಿಕೆಯನ್ನು ಸುಗಮವಾಗಿ ಕೈಗೊಳ್ಳಲು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಜಿಲ್ಲೆಯ ಕೇಂದ್ರಸ್ಥಾನದಲ್ಲಿ ಕೈಗೊಳ್ಳಲಾಗುತ್ತಿದ್ದು, ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತುಮಕೂರು ನಗರ ಮತ್ತು ಗ್ರಾಮಾಂತರ ಹಾಗೂ ಕುಣಿಗಲ್ ವಿಧಾನಸಬಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದ್ದು, ಉಳಿದ ವಿಧಾನಸಭಾ ಕ್ಷೇತ್ರಗಳಾದ ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ತುಮಕೂರು ಗ್ರಾಮಾಂತರ, ಮಧುಗಿರಿ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ 14 ಮತ ಎಣಿಕೆ ಟೇಬಲ್ ಉಳಿದ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ 12 ಮತ ಎಣಿಕೆ ಟೇಬಲ್ ವ್ಯವಸ್ಥೆ ಮಾಡಲಾಗಿದೆ.