ಅರಸೀಕೆರೆಯಲ್ಲಿ ಮತದಾನದ ಅರಿವು ಮೂಡಿಸಲು ಜಾಥಾ
ಕ.ಪ್ರ. ವಾರ್ತೆ ಅರಸೀಕೆರೆ ಮೇ 4
ಮತದಾನ ಸಂವಿಧಾನಾತ್ಮಕ ಹಕ್ಕು, ಆಸೆ ಆಮಿಷಗಳಿಗೆ ಒಳಗಾಗಬೇಡಿ. ವಿವೇಚನೆಯಿಂದ ಮತ ಚಲಾಯಿಸಿ. ಸುಭದ್ರ ಸರ್ಕಾರಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಅಗತ್ಯ ಎಂಬ ಸಂದೇಶ ಸಾರಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತದಾನ ಬಗ್ಗೆ ಅರಿವು ಮೂಡಿಸುವ ಆಂದೋಲನ ಏರ್ಪಡಿಸಲಾಗಿತ್ತು.
ಚುನಾವಣಾ ಆಯೋಗ ಏರ್ಪಡಿಸಿದ್ದ ನಿಮ್ಮ ಮತ ನಿಮ್ಮ ಹಕ್ಕು ಎಂಬ ಸಂದೇಶದೊಂದಿಗೆ ಚುನಾವಣಾಧಿಕಾರಿ ಬಿ.ಶಿವರಾಜು ನೇತೃತ್ವದಲ್ಲಿ ತಾಲೂಕು ಕಚೇರಿ ಆವರಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿದ ಮೆರವಣಿಗೆ ಪಟ್ಟಣದ ಲಕ್ಷ್ಮಿಪುರ ಬಡಾವಣೆ, ಶ್ಯಾನುಭೋಗರ ಬೀದಿ, ಸಾಯಿನಾಥ ರಸ್ತೆ, ಪೇಟೆಬೀದಿಯಲ್ಲಿ ಸಂಚರಿಸಿತು.
ಮತದಾನ ಕರ್ತವ್ಯ, ನಿಮ್ಮ ಮತ ರಾಜ್ಯದ ಅಭಿವೃದ್ಧಿ ಪಥವನ್ನು ನಿರ್ಧರಿಸಬಲ್ಲದು, ಮತ ಮಾರಾಟದ ಸರಕಲ್ಲ, ಬನ್ನಿ ನಾಗರಿಕರೇ ನಿಮ್ಮ ಮತದಾನದ ಹಕ್ಕು ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂಬ ಅನೇಕ ಸಂದೇಶಗಳುಳ್ಳ ಘೋಷಣೆ ಕೂಗುತ್ತಾ ಅರಿವು ಮೂಡಿಸುವ ಕಾರ್ಯಕ್ರಮ ಗಮನ ಸೆಳೆಯಿತು.
ಆಂದೋಲನದಲ್ಲಿ ಅನಂತ ಸದ್ವಿದ್ಯ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ಸಮುದಾಯ, ನಾನಾ ಇಲಾಖೆಯ ಅಧಿಕಾರಿಗಳು, ಸ್ವಯಂ ಸೇವಕರು ಪಾಲ್ಗೊಂಡಿದ್ದರು.