ಆಧುನಿಕತೆಯ ಗಾಳಿ ಬೀಸಿ ಸಂಸ್ಕೃತಿಯ ಮೂಲ ಆಶಯ, ಉಳಿವಿಗೆ ಧಕ್ಕೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಮೇ 4
ಸಂಸ್ಕೃತಿಯ ಹುಟ್ಟು ಹಳ್ಳಿಗಳೇ ಆಗಿದ್ದರೂ ಪಟ್ಟಣದ ಆಧುನಿಕತೆಯ ಗಾಳಿ ಬೀಸಿ ಸಂಸ್ಕೃತಿಯ ಮೂಲ ಆಶಯ ಹಾಗೂ ಉಳಿವಿಗೆ ಧಕ್ಕೆಯಾಗುತ್ತಿದೆ. ಯುವ ಸಮುದಾಯ ಸನಾತನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದು ಹಾಸನದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಐ.ಎಂ.ಮೋಹನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ಎನ್ಸಿಸಿ ಹಾಗೂ ಪರಂಪರಾ ಕೂಟದ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ, ಜಾತಿ ಬೇರೆ ಬೇರೆಯೇ ಆಗಿದ್ದರೂ ಅವಿಭಕ್ತ ಕುಟುಂಬಗಳಾಗಿ ಬಾಳುವ ವ್ಯವಸ್ಥೆಯ ಜೊತೆಗೆ ಗ್ರಾಮ ವ್ಯವಸ್ಥೆಯ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ನಿಲ್ಲುವ ಕಾಲ ಮರಳಿ ಬರಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ಹಬ್ಬ ಹರಿದಿನಗಳು ನಮ್ಮ ಬೂಟಾಟಿಕೆಯ ವರ್ತನೆ ಹಾಗೂ ದುಂದುವೆಚ್ಚದ ಪ್ರಚಾರಕ್ಕಾಗಿ ರೂಪಿತವಾದ ಹಬ್ಬಗಳಲ್ಲ. ಅವುಗಳು ನಮ್ಮ ಸಂಸ್ಕತಿಯಲ್ಲಿನ ಬಾಂಧವ್ಯ ಸಂಸ್ಕಾರಗಳ ಉಳಿವಿಗಾಗಿ ರೂಪಿತವಾದ ಧಾರ್ಮಿಕ ಅನುಸರಣೆಗಳಾಗಿವೆ ಎಂದು ತಿಳಿಸಿದರು. ಯುವ ಸಮುದಾಯ ಹಳ್ಳಿಗಳನ್ನು ಗಟ್ಟಿಗೊಳಿಸಿ, ಗ್ರಾಮೀಣ ಸೊಗಡು ಮೂಲೆ ಗುಂಪಾಗದಂತೆ ತಡೆಯಬೇಕಾದ ಅವಶ್ಯಕತೆ ಇದೆ ಎಂದರಲ್ಲದೆ, ಯುವ ಸಮುದಾಯ ಕೃಷಿ, ಹಸಿರೀಕರಣ ಹಾಗೂ ನೀರಿನ ಸಮರ್ಪಕ ಬಳಕೆಯ ಕುರಿತು ಕಾಳಜಿ ಬೆಳೆಸಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯವಾಗಲಾರದು ಎಂದು ಆತಂಕ ವ್ಯಕ್ತಪಡಿಸಿದರು. ಹಾಸನದ ಕಲಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಂಯೋಜಕ ಪ್ರೊ.ಡಿ.ಜಿ.ಕೃಷ್ಣೇಗೌಡ ಮಾತನಾಡಿ, ನಿರಂತರ ಪರಿಶ್ರಮ ಇದ್ದಲ್ಲಿ ಸಾಧನೆ ಅಸಾಧ್ಯವೇನಲ್ಲ ಎಂದರು.