ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ಚಲಾಯಿಸಿ
ಕ.ಪ್ರ. ವಾರ್ತೆ ತುಮಕೂರು ಮೇ 4
ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸುವಂತೆ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಕರೆ ನೀಡಿದ್ದಾರೆ.
ಅವರು ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ ನಗರದಲ್ಲಿ ಹಮ್ಮಿಕೊಂಡಿರುವ ನಿರ್ಭೀತಿಯಿಂದ ಮತ ಚಲಾಯಿಸಿ ಸಭ್ಯರನ್ನು ಆಯ್ಕೆ ಮಾಡಿ ಎಂಬ ಮತದಾನ ಜಾಗೃತಿ ಅಭಿಯಾನದಲ್ಲಿ ನಗರಸಭೆ ವೃತ್ತದ ಬಳಿ ಕರಪತ್ರ ವಿತರಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ನಿಜವಾದ ಅರ್ಥ ಸಾಕಾರಗೊಳ್ಳುವುದೇ ಚುನಾವಣೆ ಸಮಯದಲ್ಲಿ. ಇಂತಹ ಸಮಯದಲ್ಲಿ ನಿರ್ಲಕ್ಷ್ಯ ವಹಿಸಿ ಮನೆಯಲ್ಲಿ ಮಲಗಿದರೆ ಅಸಭ್ಯರು ಆರಿಸಿ ಬರುತ್ತಾರೆ. ಸಭ್ಯರು ಬರಬೇಕಾದರೆ ನಮ್ಮಲ್ಲಿ ಆತ್ಮಾವಲೋಕನ ಮಾಡಬೇಕು. ಮನೆಯಿಂದ ಹೊರಬಂದು ಮತಚಲಾವಣೆ ಕಾರ್ಯದಲ್ಲಿ ಭಾಗವಹಿಸುವಂತಾಗಬೇಕು. ಇದೊಂದು ಹಕ್ಕು ಮಾತ್ರವಲ್ಲದೆ ಪವಿತ್ರ ಕರ್ತವ್ಯ ಕೂಡ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ ಮಾತನಾಡಿ ರಾಜಕೀಯ ಕ್ಷೇತ್ರ ಎಂದರೆ ಭ್ರಷ್ಟಾಚಾರ ಎನ್ನುವ ಹಂತಕ್ಕೆ ಬಂದು ತಲುಪಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ ಕಡಿಮೆ ಮಾಡಲು ಉತ್ತಮ ಪ್ರತಿನಿಧಿಗಳು ಆಯ್ಕೆಯಾಗಬೇಕು. ಇದಕ್ಕಾಗಿ ಪ್ರಜೆಗಳಾದ ಮತದಾರರು ಜಾಗೃತರಾಗಬೇಕು ಎಂದರು.
ಲೇಖಕಿ ಬಾ.ಹ. ರಮಾಕುಮಾರಿ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ. ರಾಜಕುಮಾರ್, ಕಾರ್ಯದರ್ಶಿ ಮಮತ ರವಿಕುಮಾರ್, ವಕೀಲರ ನರಸಿಂಹಯ್ಯ, ಸಾಂತ್ವನ ಕೇಂದ್ರದ ಅಂಬುಜಾಕ್ಷಿ, ಪಾರ್ವತಮ್ಮ, ನಂಜುಂಡಪ್ಪ, ಹೇಮಾದ್ರಿ ಕಾಲೇಜಿನ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ಸುಮ ಸಿ.ವಿ, ವಿದ್ಯಾ ಮುಂತಾದವರು ಕರಪತ್ರ ವಿತರಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.