ಕಲ್ಪತರು ನಾಡಲ್ಲಿ 'ಮತದಾನ' ಕುತೂಹಲ
ಕ.ಪ್ರ. ವಾರ್ತೆ ತುಮಕೂರು ಮೇ 4
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕಲ್ಪತರು ಜಿಲ್ಲೆ ಸಕಲ ಸಜ್ಜಾಗಿದೆ.
ಈಗಾಗಲೇ ಮತಗಟ್ಟೆ ಅಧಿಕಾರಿಗಳು, ಚುನಾವಣೆಗೆ ನೇಮಕಗೊಂಡಿರುವವರು ನಿಯೋಜನೆಗೊಂಡಿರುವ ಊರುಗಳಿಗೆ ತೆರಳಿದ್ದಾರೆ. ಅಲ್ಲದೇ ಮತಯಂತ್ರಗಳ ಪರಿಶೀಲನೆ ಕಾರ್ಯ ಕೂಡ ನಡೆಯಿತು. ಇನ್ನೊಂದೆಡೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅಂತಿಮ ಹಂತದ ಪರಿಶೀಲನೆ ನಡೆಸಿದರು. ವಿವಿಧ ಅಧಿಕಾರಿಗಳ ಜತೆ ಸಮಾಲೋಚನೆ ಸಹ ನಡೆಸಿದರು.
ಚುನಾವಣೆ ಸಂಬಂಧ ಈಗಾಗಲೇ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ ವಹಿಸಲಾಗಿದೆ. ಚೆಕ್ಪೋಸ್ಟ್ಗಳನ್ನು ಬಿಗಿಗೊಳಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಈಗಾಗಲೇ ಮದ್ಯದಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಕಳೆದ 20 ದಿವಸದಿಂದ ನಿರಂತರವಾಗಿ ನಡೆಯುತ್ತಿದ್ದ ಬಿರುಸಿನ ರಾಜಕೀಯ ಚಟುವಟಿಕೆ ಈಗ ಮುಕ್ತಾಯ ಹಂತಕ್ಕೆ ಬಂದಿದೆ.
ಕ್ಷೇತವಾರು ಮತದಾರರು: ಜಿಲ್ಲೆಯಲ್ಲಿ ಒಟ್ಟು 20 ಲಕ್ಷದ 21 ಸಾವಿರ 626 ಮತದಾರರಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ 198349, ತಿಪಟೂರಿನಲ್ಲಿ 171554, ತುರುವೇಕೆರೆಯಲ್ಲಿ 174949, ಕುಣಿಗಲ್ನಲ್ಲಿ 170385, ತುಮಕೂರು ನಗರದಲ್ಲಿ 210366, ತುಮಕೂರು ಗ್ರಾಮಾಂತರದಲ್ಲಿ 175325, ಕೊರಟಗೆರೆಯಲ್ಲಿ 181540, ಗುಬ್ಬಿಯಲ್ಲಿ 168075, ಶಿರಾದಲ್ಲಿ 211495, ಪಾವಗಡಲ್ಲಿ 186128 ಹಾಗೂ ಮಧುಗಿರಿಯಲ್ಲಿ 182490 ಮತದಾರರಿದ್ದಾರೆ.
ದೂರುಗಳಿಗೆ ಕಂಟ್ರೋಲ್ ರೂಂ: ಚುನಾವಣಾ ಸಂದರ್ಭದಲ್ಲಿ ಬರುವ ದೂರುಗಳನ್ನು ಸಂಗ್ರಹಿಸಿ ಸಂಬಂಧಪಟ್ಟವರಿಗೆ ವರ್ಗಾಯಿಸಲು ಅನುವಾಗುವಂತೆ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಹಾಗೂ ಅಕ್ರಮಗಳು ಕಂಡುಬಂದಲ್ಲಿ ಕಂಟ್ರೋಲ್ ರೂಂಗೆ ಸಂಪರ್ಕಿಸಬಹುದಾಗಿದೆ. ದೂರುಗಳನ್ನು ಆಧರಿಸಿ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ತಂಡಗಳಿಗೆ ಸೂಚಿಸಲಾಗಿದೆ. ನೇಮಕಾತಿ ಮಾಡಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ ತಂಡದ ಮುಖ್ಯಸ್ಥರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ನೇಮಕಾತಿ ಮಾಡಲಾಗಿದ್ದು, ಅವರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಿರಂತರವಾಗಿ 24 ಗಂಟೆಗಳ ಕಾಲ ಸಂಚರಿಸುವಂತೆ ಮತ್ತು ಕಾರ್ಯನಿರ್ವಹಣಾ ಸ್ಥಳದಲ್ಲೇ ವಾಸ್ತವ್ಯ ಹೂಡುವಂತೆ ಸೂಚಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲೇ ಮತ ಎಣಿಕೆ: ಜಿಲ್ಲೆಯ ಎಲ್ಲ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಜಿಲ್ಲಾ ಕೇಂದ್ರದಲ್ಲೇ ಕೈಗೊಳ್ಳಲಾಗುತ್ತಿದೆ. ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ವಿಶ್ವವಿದ್ಯಾಲಯದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತುಮಕೂರು ನಗರ ಮತ್ತು ಗ್ರಾಮಾಂತರ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ. ಉಳಿದ ವಿಧಾನಸಭಾ ಕ್ಷೇತ್ರಗಳಾದ ತುರುವೇಕೆರೆ, ತಿಪಟೂರು, ಚಿ.ನಾ.ಹಳ್ಳಿ, ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತಎಣಿಕೆಯನ್ನು ತುಮಕೂರು ವಿವಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ.
ತುಮಕೂರು ಗ್ರಾಮಾಂತರ, ಮಧುಗಿರಿ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ 14 ಮತ ಎಣಿಕೆ ಟೇಬಲ್ಗಳನ್ನು ಉಳಿದ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ 12 ಮತ ಎಣಿಕೆ ಟೇಬಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ.