ಪಶು ವೈದ್ಯರದ್ದು ನಿಸ್ವಾರ್ಥ ಸೇವೆ..
ಕ.ಪ್ರ.ವಾರ್ತೆ ತುಮಕೂರು ಮೇ 4
ಪಶು ವೈದ್ಯರದ್ದು ನಿಸ್ವಾರ್ಥ ಸೇವೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ರಜಿನಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಪಶುವೈದ್ಯರ ಸಂಘ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಪಶುವೈದ್ಯ ದಿನಾಚರಣೆಯಲ್ಲಿ ರಕ್ಷಣೆ ಮತ್ತು ತಡೆಗೆ ಲಸಿಕೆಗಳು ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪಶುವೈದ್ಯರು ಹಾಗೂ ಮಕ್ಕಳ ತಜ್ಞರ ಕಾರ್ಯವೈಖರಿ, ಸವಾಲುಗಳು ಒಂದೇ ತೆರನಾಗಿದೆ ಎಂದು ವಿಶ್ಲೇಷಿಸಿದರು. ಲಭ್ಯವಿರುವ ಸೌಕರ್ಯದಿಂದಲೇ ರೈತರ ಜೀವನಾಡಿಯಾಗಿರುವ ಪಶುವೈದ್ಯರು ಸ್ವಾರ್ಥಿಗಳಾಗುವ ಅವಕಾಶವೇ ಇಲ್ಲದವರೆಂದು ತಿಳಿಸಿದರು.
ಜಾನುವಾರುಗಳಿಗೆ ಹೆಚ್ಚು ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಾಣಿಜನ್ಯ ರೋಗಗಳ ಹತೋಟಿಗೆ ಮಾನವ ವೈದ್ಯರೊಂದಿಗೆ ಸಹಕರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ತಿಳಿಸಿದರು.
ಸಂಘದ ಅಧ್ಯಕ್ಷ ಡಾ. ವೈ.ಜಿ. ಕಾಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಪಶುವೈದ್ಯರು ಕೇವಲ ಜಾನುವಾರು ಚಿಕಿತ್ಸೆಗೆ ಸೀಮಿತವಾಗದೆ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಪ್ರೇರೇಪಿಸಿ ರೈತರ ಆರ್ಥಿಕ ಸ್ವಾವಲಂಬನೆಯ ಗುರಿ ಸಾಧಿಸಿದಾಗ ಪಶುವೈದ್ಯ ದಿನಾಚರಣೆ ಸಾರ್ಥಕ ಭಾವ ಪಡೆಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಪಿ.ಟಿ. ಶ್ರೀನಿವಾಸ್ ಅವರು ಜಿಲ್ಲೆಯಲ್ಲಿ ಪಶುವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರೈತರಿಗೆ ಲಸಿಕೆಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ಡಾ. ಟಿ.ವಿ. ಕಾಂತರಾಜು ಅವರನ್ನು ಸನ್ಮಾನಿಸಲಾಯಿತು. ಡಾ. ವಿ.ಸಿ. ರುದ್ರಪ್ರಸಾದ್ ನಿರೂಪಿಸಿದರು. ಡಾ. ಗಿರೀಶ್ ಬಾಬು ವಂದಿಸಿದರು. ಡಾ. ದತ್ತ ಹಾಗೂ ಡಾ. ಡಿ.ಎನ್. ವಿಶ್ವನಾಥರೆಡ್ಡಿ ಇದ್ದರು.