ಮತದಾನಕ್ಕೆ ಮಧುಗಿರಿ ಸಜ್ಜು
ಕ.ಪ್ರ. ವಾರ್ತೆ ಮಧುಗಿರಿ ಮೇ 4
ಏಕಶಿಲಾ ಬೆಟ್ಟದ ಬಿಸಿಲ ನಾಡಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಕಳೆದ 15 ದಿನಗಳಿಂದ ಭರ್ಜರಿ ಪ್ರಚಾರ ನಡೆಸಿ ಗುಟ್ಟು ಬಿಟ್ಟುಕೊಡದ ಮತದಾರನ ಮನೆಗೆ ತೆರಳಿ ಮತ ಭಿಕ್ಷೆ ಬೇಡಿ, ಶುಕ್ರವಾರ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದಂತೆ ಕ್ಷೇತ್ರದಾದ್ಯಂತ ನೀರವ ಮೌನ ಆವರಿಸಿತ್ತು. ಇದೀಗ ಚುನಾವಣಾ ಆಯೋಗ ಮುಕ್ತ ಹಾಗೂ ನ್ಯಾಯ ಸಮ್ಮತ ಮತದಾನಕ್ಕಾಗಿ ಸಕಲ- ಸಿದ್ದತೆ ನಡೆಸಿದೆ.
ಮೇ 5ರ ಭಾನುವಾರ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕಾಗಿ ಕ್ಷೇತ್ರದಲ್ಲಿ 242 ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿದೆ. ಈ ಪೈಕಿ 70 ಅತಿ ಸೂಕ್ಷ್ಮ, 77 ಸೂಕ್ಷ್ಮ, 95 ಸಾಮಾನ್ಯ ಕೇಂದ್ರಗಳೆಂದು ಗುರುತಿಸಿದೆ. ಎಲ್ಲ 242 ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಿದೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 93,079 ಪುರುಷರು, 89,407 ಮಹಿಳಾ ಮತದಾರರು, ಇತರೆ 4, ಒಟ್ಟು 1,82,490 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
242 ಮತಗಟ್ಟೆ ಪೈಕಿ ಒಂದು ಮತಗಟ್ಟೆಗೆ 4 ಜನರಂತೆ ಒಟ್ಟು 968 ಸಿಬ್ಬಂದಿ ನೇಮಿಸಿದ್ದು, 200 ಮೀಸಲು ಸಿಬ್ಬಂದಿ ನೇಮಕ ಮಾಡಲಾಗಿದೆ. ಸೆಕ್ಟರಲ್ ಆಫೀಸರ್ 21, ಸ್ಪೆಷಲ್ ಎಇಇ 6, ಡಿವೈಎಸ್ಪಿ 1, ಸಿಪಿಐ, ಪಿಎಸೈ, ಎಎಸೈ ಸೇರಿದಂತೆ ಒಟ್ಟು 25, ಬಾರ್ಡ್ ಪೋಲಿಸ್ 16, ಪೋಲಿಸ್ ಸಿಬ್ಬಂದಿ 118, ಗೃಹರಕ್ಷಕ ದಳ 106 ಜನರನ್ನು ನೇಮಿಸಿದ್ದು ಬಿಗಿ ಬಂದೋಬಸ್ತ್ ಕೈಗೊಂಡಿದೆ.