ಯುವ ಪೀಳಿಗೆಗೆ ಆತ್ಮವಿಶ್ವಾಸ ಮೂಡಿಸುವಂಥ ಶಿಕ್ಷಣ ಅವಶ್ಯ: ಪ್ರೊ. ಜವರೇಗೌಡ ಅಭಿಮತ
ಕನ್ನಡಪ್ರಭವಾರ್ತೆ ಹಾಸನ ಮೇ 4
ಅಹಂಕಾರವನ್ನು ನಾಶ ಮಾಡಿಕೊಂಡಾಗ ಮಾತ್ರ ವಿದ್ಯೆ ಎಂಬುದನ್ನು ಸಂಪಾದಿಸಬಹುದು ಎಂದು ಪ್ರೊ.ಜವರೇಗೌಡ ಅಭಿಪ್ರಾಯಪಟ್ಟರು. ನಗರದ ಆಕ್ವಿವ್ ರೂರಲ್ ಎಜುಕೇಶನ್ ಟ್ರಸ್ಟ್ ಮತ್ತು ಜ್ಞಾನಧಾರೆ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಕಾಲೇಜು ವಾರ್ಷಿಕೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಕವಿಯೊಬ್ಬರ ಮಾತಿನಂತೆ ವಿಚಾರ ಕೇಳುವುದರಿಂದ ಯಾವುದೇ ಫಲ ದೊರಕದು ಬದಲಿಗೆ ಕೇಳುವುದಕ್ಕೆ ಮುನ್ನ ಆತ ಮನಸ್ಸನ್ನು ಹದ ಮಾಡಿ ಕೊಂಡಿರಬೇಕು. ಆತ್ಮವಿಶ್ವಾಸ ಮೂಡಿಸುವಂತಹ ಶಿಕ್ಷಣ ಇಂದಿನ ಯುವ ಪೀಳಿಗೆಗೆ ಅವಶ್ಯಕವಾಗಿದ್ದು, ವಿದ್ಯೆಯಿಲ್ಲದ ಯಾವುದೇ ದುಡಿಮೆಯಿಂದ ವ್ಯಕ್ತಿಗೆ ಸಿರಿತನ ಮತ್ತು ದೊಡ್ಡಸ್ಥಿಕೆ ದೊರೆಯುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಸಚಿನ್ ತೆಂಡೂಲ್ಕರ್ ಆದರ್ಶ ಅಳವಡಿಸಿಕೊಳ್ಳಬೇಕು. ಮತ್ತು ನಿಮ್ಮಲ್ಲಿ ನಿಮಗೆ ತಿಳಿಯದ ಹಾಗೆ ಪ್ರತಿಭೆ, ಶಕ್ತಿ, ಜ್ಞಾನ ಅಡಗಿದ್ದು ಅದನ್ನು ಹೊರತೆಗೆಯುವ ಮನಸ್ಸಿದ್ದರೆ ಸಾಧನೆ ಮಾಡಬಹುದು ಎಂದರು. ಮೊಬೈಲ್ ಎಂಬ ಭೂತ ವಿದ್ಯಾರ್ಥಿಗಳ ಜೀವನದಲ್ಲಿ ಪ್ರವೇಶಿಸಿ ಅವರ ಬದುಕನ್ನೇ ಹಾಳುಗೆಡುವುತ್ತಿದ್ದು, ಅವರಲ್ಲಿರುವ ಸಾಮಾಜಿಕ, ಶೈಕ್ಷಣಿಕ ಜವಾಬ್ದಾರಿಯನ್ನು ಮರೆಸುತ್ತಿದೆ. ಇಂದಿನ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಕಟ್ಟುವ ಸಮಯ ಪ್ರಜ್ಞೆಯನ್ನು ಮರೆಯುತ್ತಿರುವುದು ವಿಪರ್ಯಾಸವೇ ಸರಿ ಎಂದು ಜ್ಞಾನಧಾರೆ ಸಂಜೆ ಕಾಲೇಜಿನ ಪ್ರಾಂಶುಪಾಲ ಎಸ್.ಪಿ.ಯೋಗೇಶ್ ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಿದರು.