ಸರ್ಕಾರಿ ಪ.ಪೂ. ಕಾಲೇಜು ಆವರಣದಿಂದ ಹೊರಟ ಚುನಾವಣಾ ಸಿಬ್ಬಂದಿ
ಕ.ಪ್ರ. ವಾರ್ತೆ ಶಿರಾ ಮೇ 4
ಚುನಾವಣೆಗೆ ಸಿಬ್ಬಂದಿ ವರ್ಗ ಸಾಮಗ್ರಿಗಳು ಮತ್ತು ಮತಯಂತ್ರವನ್ನು ತೆಗೆದುಕೊಂಡು ತಮಗೆ ನಿಯೋಜಿಸಿದ ಸ್ಥಳಕ್ಕೆ ಹೋಗಲು ತಮ್ಮ ಸಹೊದ್ಯೋಗಿಗಳೊಂದಿಗೆ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಆವರಣದಿಂದ ಶನಿವಾರ ಹೊರಟರು.
ಶಿರಾ ಕ್ಷೇತ್ರದಲ್ಲಿ ಒಟ್ಟು 264 ಮತಗಟ್ಟೆಗಳಿದ್ದು 1 ಮತಗಟ್ಟೆಗೆ ಪೋಲಿಂಗ್ ಆಫಿಸರ್, ಸಹಾಯಕ ಪೋಲಿಂಗ್ ಆಫಿಸರ್, ಇಬ್ಬರು ಸಹಾಯಕರನ್ನೊಳಗೊಂಡಂತೆ ಒಟ್ಟು 4 ಜನರಂತೆ ಕ್ಷೇತ್ರದಲ್ಲಿ 1056 ಜನ ಸಿಬ್ಬಂದಿ ಮತ್ತು ಹೆಚ್ಚುವರಿಯಾಗಿ 138 ಜನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಚುನಾವಣಾಧಿಕಾರಿ ದೊರೆಸ್ವಾಮಿ ತಿಳಿಸಿದ್ದಾರೆ.
ಮಸ್ಟರಿಂಗ್ ಸಮಯದಲ್ಲಿ ಜಿಲ್ಲೆಯ ಹಲವು ತಾಲೂಕಿನಿಂದ ಸಿಬ್ಬಂದಿಗಳು ಬಂದಿದ್ದು, ಪ್ರತಿಯೊಬ್ಬರಿಗೂ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದರು.
ಪ್ರತಿ ಮತಗಟ್ಟೆಗೆ ದೂರವಾಣಿ ಸಂಪರ್ಕವನ್ನು ಕಲ್ಪಿಸಿದ್ದು ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುವುದು. ಪ್ರತಿಯೊಬ್ಬ ಸಿಬ್ಬಂದಿಗೂ ತಮ್ಮ ಕಾರ್ಯಕ್ಷಮತೆಯನ್ನು ತೋರಿಸಿಕೊಟ್ಟಿದೆ. ಹಾಗೂ ಪ್ರತಿ ಮತಗಟ್ಟೆಗೆ ಒಬ್ಬ ಸಿ.ಆರ್.ಪಿ.ಎಫ್., ಒಬ್ಬ ಪೋಲಿಸ್, ಒಬ್ಬ ಹೋಂ ಗಾರ್ಡ್‌ನನ್ನು ನೇಮಕ ಮಾಡಲಾಗಿದೆ.
ಅಹಿತಕರ ಘಟನೆಯನ್ನು ತಡೆಯಲು ಎಲ್ಲಾ ರೀತಿಯ ಬಿಗಿ ಬಂದೋಬಸ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಚುನಾವಣಾಧಿಕಾರಿ ದೊರೆಸ್ವಾಮಿ ತಿಳಿಸಿದ್ದಾರೆ.