ಅಬಕಾರಿ ಸಿಬ್ಬಂದಿ ದಾಳಿ: 12 ಲೀಟರ್ ಮದ್ಯ, 14 ಸಾವಿರ ವಶ
ಕ.ಪ್ರ.ವಾರ್ತೆ ತುರುವೇಕೆರೆ ಮೇ 5
ತಾಲೂಕಿನ ಡಿ.ಕಲ್ಕೆರೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸ್ಥಳೀಯ ಅಬಕಾರಿ ನಿರೀಕ್ಷಕ ಕೆ.ಟಿ. ವಿಜಯಕುಮಾರ್ ಹಾಗೂ ಎಸೈ ಮಧುಸೂಧನ್ ಅವರ ಸಿಬ್ಬಂದಿ ಪರಮೇಶ್ ಎಂಬುವವರ ಮನೆ ಮೇಲೆ ದಾಳಿ ಮಾಡಿದ ಪರಿಣಾಮ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ವಿವಿಧ ಕಂಪನಿಗಳ ಸುಮಾರು 12 ಲೀಟರ್ ಮದ್ಯ ಹಾಗೂ ಮಾರಾಟ ಮಾಡಿ ಸಂಗ್ರಹಿಸಿಟ್ಟಿದ್ದ ಸುಮಾರು 14 ಸಾವಿರ ರು.ಗಳನ್ನು ಭಾನುವಾರ ಸಾಯಂಕಾಲ ವಶಪಡಿಸಿಕೊಂಡಿದೆ.
ಮನೆ ಮಾಲೀಕ ಪರಮೇಶ್ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ. ಮತದಾನದ ದಿನದಂದೂ ಸಹ ಆತ ಮದ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಬಂದ ತರುವಾಯ ನಿರೀಕ್ಷಕ ವಿಜಯಕುಮಾರ್ ಎಸೈ ಮಧುಸೂಧನ್, ಸಿಬ್ಬಂದಿಗಳಾದ ರಾಮು, ಮಂಜು, ಪ್ರಕಾಶ್, ರೇಣುಕಪ್ಪ ದಿಢೀರ್ ದಾಳಿ ಮಾಡಿದರು. ಮನೆಯೊಳಗೆ ಅಡಗಿಸಿಟ್ಟಿದ್ದ ಮದ್ಯವನ್ನು ಹಾಗೂ ಹಣವನ್ನು ಸಿಬ್ಬಂದಿ ವಶ ಪಡಿಸಿಕೊಂಡಿತು. ಮನೆ ಮಾಲೀಕ ಪರಮೇಶ್ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸಿಪಿಐ ವಿಜಯಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.