ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ

Rashmi Kasaragodu
Updated On : 5 May 2013, 11:41 am

ಕ.ಪ್ರ.ವಾರ್ತೆ   ತುಮಕೂರು   ಮೇ 5
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸೇರಿದಂತೆ 146 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಕೊರಟಗೆರೆ ಮೀಸಲು ಕ್ಷೇತ್ರದಿಂದ ಪರಮೇಶ್ವರ್, ಶಿರಾ ವಿಧಾನಸಭಾ ಕ್ಷೇತ್ರದಿಂದ ಜಯಚಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಈಗಾಗಲೇ 4 ಬಾರಿ ಗೆದ್ದಿರುವ ಪರಮೇಶ್ವರ್ ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ಟಿ.ಬಿ. ಜಯಚಂದ್ರ ಅವರು 5 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು 6ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಅವರು ಸತತ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು ಐದನೇ ಬಾರಿ ಗೆಲ್ಲುತ್ತಾರೋ ಎಂಬ ಚರ್ಚೆ ನಡೆದಿದೆ. ಉಳಿದಂತೆ ಮೂವರು ಮಹಿಳಾ ಅಭ್ಯರ್ಥಿಗಳ  ಭವಿಷ್ಯ ಕೂಡ ನಿರ್ಧಾರವಾಗಲಿದೆ. ಒಟ್ಟು 146 ಮಂದಿ ಅಭ್ಯರ್ಥಿಗಳ ಭವಿಷ್ಯ ಏನಾಗುತ್ತೆ ಎಂಬುದಕ್ಕೆ 8 ರವರೆಗೆ ಕಾಯಲೇಬೇಕು.
ಗುಬ್ಬಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಎಸ್.ಆರ್. ಶ್ರೀನಿವಾಸ್ ಸತತ ಎರಡು ಬಾರಿ ಆಯ್ಕೆಯಾಗಿದ್ದು ಮೂರನೇ ಬಾರಿ ಸ್ಪರ್ಧಿಸಿದ್ದಾರೆ. ಹಾಗೆಯೇ ತುರುವೇಕೆರೆಯ ಜೆಡಿಎಸ್ ಅಭ್ಯರ್ಥಿ ಎಂ.ಟಿ. ಕೃಷ್ಣಪ್ಪ ಅವರು ಸಹ ಮೂರನೇ ಬಾರಿ ಗೆಲುವು ಸಾಧಿಸುತ್ತಾರೋ ಎಂಬ ಉತ್ತರಕ್ಕೆ ಇನ್ನು 3 ದಿನ ಕಾಯಬೇಕಾಗಿದೆ.
ಪಾವಗಡದಲ್ಲಿ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ವೆಂಕಟರಮಣಪ್ಪ ಅವರು ಈ ಬಾರಿ ಸ್ಪರ್ಧಿಸಿಲ್ಲ. ಅವರ ಬದಲಿಗೆ ಅವರ ಪುತ್ರ ವೆಂಕಟೇಶ್ ಸ್ಪರ್ಧಿಸಿದ್ದು ಅವರ ಭವಿಷ್ಯ ಕೂಡ ನಿರ್ಧಾರವಾಗಬೇಕಾಗಿದೆ.
ತುಮಕೂರು ಜಿಲ್ಲೆಯ ಒಟ್ಟು 11 ವಿಧಾನಸಭಾ ಕ್ಷೇತ್ರದಲ್ಲಿ ಶಿರಾ, ತುಮಕೂರು ಹಾಗೂ ಕೊರಟಗೆರೆ ಪ್ರತಿಷ್‌ಠಿತ ಕ್ಷೇತ್ರವಾಗಿದೆ. ಒಟ್ಟಾರೆಯಾಗಿ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಮತದಾನವಾಗಿದ್ದು ಯಾರಿಗೆ ವಿಜಯದ ಮಾಲೆ ಬೀಳುತ್ತದೆ ಎಂಬ ಕುತೂಹಲವಷ್ಟೆ ಈಗ ಉಳಿದಿರುವುದು. ಹಾಗೆಯೇ ಕಳೆದ ಬಾರಿ ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಮಧುಗಿರಿ ಕ್ಷೇತ್ರ ಕೂಡ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಈ ಬಾರಿ ಕಾಂಗ್ರೆಸ್‌ನಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಸ್ಪರ್ಧಿಸಿದ್ದಾರೆ. ಹಾಗೆಯೇ ಜೆಡಿಎಸ್‌ನಿಂದ ವೀರಭದ್ರಯ್ಯ ಸ್ಪರ್ಧಿಸಿದ್ದು ಇವರ ಭವಿಷ್ಯ ಕೂಡ ಮೇ 8 ರಂದು ನಿರ್ಧಾರವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement