ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಣಿಗಲ್ ತಾಲೂಕಿನಾದ್ಯಂತ ಶಾಂತಿಯುತ ಮತದಾನ

Rashmi Kasaragodu
Updated On : 5 May 2013, 11:38 am

ಕ.ಪ್ರ.ವಾರ್ತೆ   ಕುಣಿಗಲ್   ಮೇ 5
ವಿಧಾನಸಭಾ ಚುನಾವಣೆಗಳು ತಾಲೂಕಿನಾದ್ಯಂತ ಬಹುತೇಕ ಶಾಂತಿಯಿಂದ ನಡೆದಿದ್ದು, ಬೆಳಗ್ಗೆಯಿಂದ ನೀರಸವಾಗಿ ನಡೆದ ಮತದಾನ, ಮಧ್ಯಾಹ್ನದ ನಂತರ ಬಿರುಸುಗೊಂಡು, ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.  ಬಹುತೇಕ ಕಡೆ ಮಹಿಳಾ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು.
ಬೆಳಗ್ಗೆ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡ ವೇಳೆಯಲ್ಲಿ ಪಟ್ಟಣದ ಮಲ್ಲಿಪಾಳ್ಯ ಮತದಾನ ಕೇಂದ್ರ ಪ್ರವೇಶಕ್ಕೆ ಸೂಕ್ತ ಪ್ರವೇಶದ್ವಾರ ಇಲ್ಲದೆ ಕೆಲವೇಳೆ ಗೊಂದಲ ಉಂಟಾಯಿತು. ಅಧಿಕಾರಿಗಳು ನಂತರ ಸರಿಪಡಿಸಿದರೆ, ಹುತ್ರಿಬೆಟ್ಟದ ಮತದಾನ ಕೇಂದ್ರದಲ್ಲಿ ಮತಯಂತ್ರ ಕೈ ಕೊಟ್ಟು ಕಾರಣ  ಬೇರೆ ಯಂತ್ರ ಬದಲಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು.
ಯಶಸ್ವಿಯಾಗಲಿಲ್ಲ: ಪಟ್ಟಣಕ್ಕೆ ಹೊಂದುಕೊಂಡಿರುವ ಎರಡನೇ ವಾರ್ಡ್‌ನ ಮಲ್ಲಾಘಟ್ಟ  ಮತದಾನ ಕೇಂದ್ರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹೂವಿನ ಲಾಂಚನ ಇದ್ದರೂ, ಅಧಿಕಾರಿಗಳು ಮುಚ್ಚದೆ ಮತದಾನ ಪ್ರಕ್ರಿಯೆ ನಡೆಸಿದರೆ, ಅಮೃತೂರಿನ ಮತಗಟ್ಟೆ ಕೇಂದ್ರವೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಪರ ಮತದಾನ ಕೇಂದ್ರದಲ್ಲೆ ಪ್ರಚಾರ ನಡೆಸಿದ್ದರ ಬಗ್ಗೆ ಕೆಲ ವಾಗ್ವಾದ ನಡೆಯಿತು. ಚುನಾವಣೆ ಆಯೋಗ ಮೊದಲ ಬಾರಿಗೆ ಮತಗಟ್ಟೆ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಿಕೊಂಡಿದ್ದ ಐದು ಮತಗಟ್ಟೆಗಳಲ್ಲಿ ಅಮೃತೂರು ಮತಗಟ್ಟೆಯಲ್ಲಿ ಮಾತ್ರ ಪ್ರಯೋಗ ಯಶಸ್ವಿಯಾಗಿ ಉಳಿದ ನಾಲ್ಕು ಕಡೆ ತಾಂತ್ರಿಕ ತೊಂದರೆಗಳಿಂದ ಯಶಸ್ವಿಯಾಗಲಿಲ್ಲ.
ನಾಗರಾಜಯ್ಯ ಮತ ಚಲಾವಣೆ: ಮಾಜಿ ಸಚಿವ, ಜೆಡಿಎಸ್ ಅಭ್ಯರ್ಥಿ ಡಿ.ನಾಗರಾಜಯ್ಯ ಸ್ವಗ್ರಾಮ ಕನ್ನಗುಣಿಯಲ್ಲಿ ಮತಚಲಾಯಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಬಸವಮತ್ತೀಕೆರೆ ಗ್ರಾಮದಲ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಕನ್ನಗುಣಿ ಗ್ರಾಮದಲ್ಲಿ ಮತಚಲಾವಣೆ ಮಾಡಿದರು. ಯಡವಾಣಿ ಮತದಾನ ಕೇಂದ್ರದಲ್ಲಿ 95 ವರ್ಷದ ವೃದ್ಧೆ ಅಲಮೇಲಮ್ಮ ಮಗನ ಸಹಾಯದಿಂದ ಬಂದು ಮತಚಲಾವಣೆ ಮಾಡಿದರೆ, ಕೆ. ಹೊನ್ನಮಾಚನಹಳ್ಳಿ ಗ್ರಾಮದಲ್ಲಿ ಅಂಧ ಲಕ್ಷ್ಮಮ್ಮ ತಮ್ಮ ಮಗ ಹುಚ್ಚಪ್ಪನ ಸಹಾಯದಿಂದ ಮತಚಲಾವಣೆ ಮಾಡಿದರು. ಸಂಜೆ ಐದು ಗಂಟೆ ವೇಳೆಗೆ ತಾಲೂಕಿನಾದ್ಯಂತ ಶೇಕಡಾ 76ರಷ್ಟು ಮತದಾನ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement