ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಿದ್ಧಗಂಗಾ ಶ್ರೀ ಸೇರಿ ಗಣ್ಯಾತಿಗಣ್ಯರಿಂದ ಮತದಾನ

Rashmi Kasaragodu
Updated On : 5 May 2013, 11:37 am

ಕ.ಪ್ರ.ವಾರ್ತೆ   ತುಮಕೂರು   ಮೇ 5
ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ, ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸೇರಿ ತುಮಕೂರು ನಗರದ ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳು ಮತ ಚಲಾಯಿಸಿದರು.
ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಭಾನುವಾರ ಬೆಳಗ್ಗೆ ಸಿದ್ಧಗಂಗಾ ಮಠದ ಆವರಣದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮೊದಲನೆಯವರಾಗಿ ಬಂದು ಮತ ಚಲಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ ಅವರು ಚಿಕ್ಕಪೇಟೆಯ ಆರ್ಯಭಾರತಿ ಪ್ರೌಢಶಾಲೆಯಲ್ಲಿ ಮತ ಚಲಾಯಿಸಿದರು. ಸಂಸದ ಜಿ.ಎಸ್. ಬಸವರಾಜು ಹಾಗೂ ಕೆಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಅವರು ನಗರದ ಸಿದ್ಧಗಂಗಾ ಬಾಲಕರ ಕಾಲೇಜಿನಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ತುಮಕೂರು ಗ್ರಾ. ವಿಧಾನಸಭಾ ಕ್ಷೇತ್ರದ ಹೆಗ್ಗೆರೆಯ ಪ್ರೌಢಶಾಲೆಯ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ತುಮಕೂರು ನಗರ ಕಾಂಗ್ರೆಸ್ ಅಭ್ಯರ್ಥಿ ರಫೀಕ್ ಅಹಮದ್ ಅವರು ಜಯನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಹಾಗೆಯೇ ವಿದ್ಯಾನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮತ ಚಲಾಯಿಸಿದರು. ಜಯಪುರ, ನಜರಾಬಾದ್ ಮುಂತಾದ ಕಡೆ ಜನತೆ ಅತ್ಯುತ್ಸಾಹದಿಂದ ಮತ ಚಲಾಯಿಸಿದರು.
ಕೆಲಕಾಲ ಗೊಂದಲ: ಕೆಲವರು ಬೆಳಗ್ಗೆ 7 ಕ್ಕೆಲ್ಲಾ ಮತ ಚಲಾಯಿಸಿದರೆ, ಮತ್ತೆ ಕೆಲವರು ಮಧ್ಯಾಹ್ನದ ನಂತರ ಬಂದು ಮತ ಚಲಾಯಿಸಿದರು. ಕೆಲ ಬೂತ್‌ಗಳಲ್ಲಿ ಹಕ್ಕು ಚಲಾಯಿಸಲು ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಗರದ ಅರಳಿಮರ ಪಾಳ್ಯದಲ್ಲಿ ಮತದಾರರ ಹೆಸರು ಡಿಲಿಟ್ ಆಗಿದೆ ಎಂದು ಆರೋಪಿಸಿ ಸಣ್ಣ ವಾಗ್ಯುದ್ದ ನಡೆಯಿತು. ಸುಮಾರು 10 ನಿಮಿಷಗಳ ಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ತಹಸೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ನಂತರ ಮತದಾನ ಎಂದಿನಂತೆ ಸರಾಗವಾಗಿ ನಡೆಯಿತು. ಮತದಾನಕ್ಕೆ ಜನತೆ ಉತ್ಸಾಹದಿಂದಲೇ ಭಾಗವಹಿಸಿದ್ದರು. ಪ್ರತಿಯೊಂದು ಬೂತ್‌ಗಳಲ್ಲಿ ಅಭ್ಯರ್ಥಿ ಪರ ಏಜೆಂಟರು, ಆಯಾ ಪಕ್ಷದ ಕಾರ್ಯಕರ್ತರ ದಂಡು ದೊಡ್ಡದಿತ್ತು. ಮತದಾರರನ್ನು ಓಲೈಸಲು ಕಡೆ ಸುತ್ತಿನ ಪ್ರಚಾರದಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರು ಶ್ರಮಿಸುತ್ತಿದ್ದರು.
ಮಳೆ ಬಂತು: ಮಧ್ಯಾಹ್ನ ದಿಢೀರ್ ಬಂದ ಜೋರು ಮಳೆಯಿಂದ ಒಂದಷ್ಟತ್ತು ಸಮಯ ಜನ ಹೊರ ಬರಲಿಲ್ಲ. ಮಳೆ ನಿಂತ ಕೂಡಲೇ ಜನ ಸ್ವಯಂ ಪ್ರೇರಿತರಾಗಿ ಬಂದು ಹಕ್ಕು ಚಲಾಯಿಸಿದರು. ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ಜನ ಉತ್ಸಾಹದಿಂದಲೇ ಮತ ಚಲಾಯಿಸಿದರು. ಕೆಲವು ಕಡೆ ಸಣ್ಣ ಪುಟ್ಟ ಮಾತಿನ ಚಕಮಕಿ ಬಿಟ್ಟರೆ ಸಂಪೂರ್ಣವಾಗಿ ಮತದಾನ ಶಾಂತವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement