ಕುಣಿಗಲ್: ಇತಿಹಾಸದಲ್ಲೇ ಅತ್ಯಧಿಕ ಮತದಾನ
ಕುಣಿಗಲ್: ಭಾನುವಾರದಂದು ನಡೆದ ಕುಣಿಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಾಲೂಕಿನ ಇತಿಹಾಸದಲ್ಲೆ ಅತ್ಯಧಿಕ ಶೇ.83.14 ಮತದಾನ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ ಡಾ.ಕೆ.ಜಿ.ಅಕುಲ್, ಚುನಾವಣಾ ಆಯೋಗದ ಕಟ್ಟು ನಿಟ್ಟಿನ ಕ್ರಮಗಳಿಂದ ಒಟ್ಟಾರೆ ಮತದಾನದ ಮೇಲೆ ಪರಿಣಾಮ ಬೀರಬಹುದೆಂಬ ರಾಜಕೀಯ ಪಕ್ಷಗಳ ಊಹೆ ನಿಜಕ್ಕೂ ಸುಳ್ಳಾಗಿದ್ದು, ಮತದಾನ ಅವಧಿ ಒಂದು ಗಂಟೆ ಹೆಚ್ಚಿಸಿರುವುದು ಸಹ ಮತದಾನದ ಪ್ರಮಾಣ ಹೆಚ್ಚಾಗಲು ಸಹಕಾರಿಯಾಗಿದೆ ಎಂದರು.
ಒಟ್ಟಾರೆ 1,70,754 ಮತದಾರರಿದ್ದು, 1,41,970 ಮತದಾರರು ತಮ್ಮ ಅಧಿಕಾರ ಚಲಾಯಿಸಿದ್ದಾರೆ. ಈ ಪೈಕಿ ಪುರುಷ ಮತದಾರರು 72270 ಹಾಗೂ ಮಹಿಳಾ ಮತದಾರರು 69699 ಮತಚಲಾಯಿಸಿದ್ದರೆ, ಇತರೆ(ಮಂಗಳಮುಖಿ) ಒಂದು ಮತ ಚಲಾಯಿಸಿದ್ದು, ತಾಲೂಕಿನಾದ್ಯಂತ ಮೂವರು ಮತದಾರರು ಮತದಾನ ಮಾಡಲು ನಿರಾಕರಿಸಿ ನಮೂದು ಮಾಡಿದ್ದಾರೆಂದು ತಿಳಿಸಿದರು.
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇದೇ ಎಂಟರಂದು ಮತ ಏಣಿಕೆ ನಡೆಯಲಿದೆ ಎಂದ ಅವರು, ಶಾಂತಿಯುತ ಮತದಾನ ಪ್ರಕ್ರಿಯೆಗೆ ಪೂರಕವಾಗಿ ಸ್ಪಂದಿಸಿದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸಿದರು.