ಪೊಲೀಸ್ ಸರ್ಪಗಾವಲಿನಲ್ಲಿ ಮತಯಂತ್ರ ಭದ್ರ
ಕ.ಪ್ರ. ವಾರ್ತೆ, ತುಮಕೂರು, ಮೇ 6
ವಿಧಾನಸಭಾ ಚುನಾವಣೆ ಮುಗಿದಿದ್ದು ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಒಟ್ಟು 146 ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಮತಯಂತ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತಯಂತ್ರಗಳನ್ನು ಇಡಲಾಗಿದೆ. ಬುಧವಾರ ಬೆಳಗ್ಗೆ ಜಿಲ್ಲಾ ಚುನಾವಣಾಧಿಕಾರಿ ಸಮ್ಮುಖದಲ್ಲಿ ಮತಗಳನ್ನು ಎಣಿಸಲಾಗುವುದು. ಸೋಮವಾರ ಬೆಳಗ್ಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಮತ್ತು ಸಿಬ್ಬಂದಿ ಮತಯಂತ್ರಗಳನ್ನು ಪರಿಶೀಲಿಸಿದರು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ಗಣನೀಯ ಏರಿಕೆಯಾಗಿದೆ. ಕಳೆದ ಸಾಲ ಶೇ. 75 ರಷ್ಟು ಮತದಾನ ಜಿಲ್ಲೆಯಲ್ಲಿ ಆಗಿತ್ತು. ಆದರೆ ಈ ಬಾರಿ ಶೇ 79 ರಷ್ಟು ಮತದಾನವಾಗಿದೆ. ಮತದಾನದ ಹಕ್ಕಿನ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಲಾಗಿತ್ತು. ಇದು ಕೂಡ ಮತದಾನ ಪ್ರಮಾಣ ಏರಿಕೆಗೆ ಸಹಾಯಕವಾಗಿದೆ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳಾದ ಶಿರಾ, ಮಧುಗಿರಿ, ಕೊರಟಗೆರೆ ಮತ್ತು ಪಾವಗಡದಲ್ಲೂ ಕೂಡ ವ್ಯಾಪಕವಾಗಿ ಮತದಾನವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಘಟಾನುಘಟಿ ರಾಜಕಾರಣಿಗಳ ಭವಿಷ್ಯ ಕೂಡ ಅಂದೇ ನಿರ್ಧಾರವಾಗಲಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಮೇಲಾಟಕ್ಕೆ ತೆರೆಬಿದ್ದಿದ್ದು ಇನ್ನೇನಿದ್ದರೂ ಕದನ ಕುತೂಹಲವಷ್ಟೆ ಬಾಕಿ ಉಳಿದಿದೆ.
ಹೆಚ್ಚುವರಿ ಪೊಲೀಸ್: ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ತುಮಕೂರಿನಲ್ಲೇ ನಡೆಯುವುದರಿಂದ ಎಲ್ಲಾ ತಾಲೂಕಿನಿಂದ ಜನ ಬರಲಿದ್ದಾರೆ. ಹೀಗಾಗಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಮತಎಣಿಕೆ ಸುತ್ತಮುತ್ತ ವಾಹನಗಳನ್ನು ನಿರ್ಬಂಧಿಸಲಾಗುವುದು. ಮತಎಣಿಕೆ ದಿನದಂದು ಎಂದಿನಂತೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಂದೋಬಸ್ತ್: ಮತಎಣಿಕೆ ದಿನದಂದು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ. ಇದಕ್ಕಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಿದ ಜಿಲ್ಲಾಡಳಿತ ಮತಎಣಿಕೆಯತ್ತ ಗಮನಹರಿಸಿದೆ.
ಜಿಲ್ಲಾಡಳಿತಕ್ಕೆ ಪ್ರಶಂಸೆ: ನಿರ್ಭಿತ ಹಾಗೂ ಮುಕ್ತ ಚುನಾವಣೆ ನಡೆಸಿದ ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಗಳು ಹಾಗೂ ಮತದಾರರು ಕೃತಜ್ಞತೆ ಸಲ್ಲಿಸಿದ್ದಾರೆ.