ಫಲಿತಾಂಶಕ್ಕೂ ಮುನ್ನ ಬೆಟ್ಟಿಂಗ್ ಜೋರು
ಕೆಲವು ಕಡೆ ಹಣದ ರೂಪದಲ್ಲಿ, ಮತ್ತೆ ಕೆಲವು ಕಡೆ ವಸ್ತುಗಳ ರೂಪದಲ್ಲಿ ನಡೆಯುತ್ತಿದೆ ಬಾಜಿ
ಕ.ಪ್ರ. ವಾರ್ತೆ ತುಮಕೂರು ಮೇ 6
ವಿಧಾನಸಭೆಯ ಮಹಾಸಮರ ಮುಗಿದು ಇನ್ನೇನು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಜಿಲ್ಲೆಯಾದ್ಯಂತ ಬೆಟ್ಟಿಂಗ್ ಹಾವಳಿ ಜೋರಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್, ಶಿರಾ ಕ್ಷೇತ್ರದ ಜಯಚಂದ್ರ, ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಎಲ್ಲಾ 11 ಕ್ಷೇತ್ರಗಳಲ್ಲೂ ಬೆಟ್ಟಿಂಗ್ ಹಾವಳಿ ಜೋರಾಗಿದೆ.
ಕೆಲವು ಕಡೆ ಹಣದ ರೂಪದಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದರೆ, ಕೆಲವು ಕಡೆ ವಸ್ತುಗಳ ರೂಪದಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. 100 ರುಪಾಯಿಯಿಂದ 10 ಲಕ್ಷದವರೆಗೂ ಬೆಟ್ಟಿಂಗ್ ಭರಾಟೆ ನಡೆಯುತ್ತಿದೆ.
ಮುಖ್ಯವಾಗಿ ಎಲ್ಲರ ಚಿತ್ತ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಮೇಲೆ ಇದೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಸಾಮಾನ್ಯ ಕ್ಷೇತ್ರವಾಗಿದ್ದ ಕೊರಟಗೆರೆ ಮೀಸಲು ಕ್ಷೇತ್ರವಾಗಿದೆ. ಕಳೆದ ಸಲ ಈ ಕ್ಷೇತ್ರವನ್ನು ಪರಮೇಶ್ವರ್ 11 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಸಾಧಿಸಿದ್ದರು. ಈ ಬಾರಿ ಗೆಲುತ್ತಾರೋ, ಎಷ್ಟು ಅಂತರದಿಂದ ಗೆಲ್ಲುತ್ತಾರೆ ಹೀಗೆ ಥರೇವಾರಿ ಬೆಟ್ಟಿಂಗ್ಗಳು ನಡೆಯುತ್ತಿದೆ.
ಕೊರಟಗೆರೆಯ ಕೆಲವು ಕಡೆ ಹಸು, ಕರು, ಎತ್ತುಗಳನ್ನೇ ಬೆಟ್ಟಿಂಗ್ ಜನ ಕಟ್ಟುತ್ತಿದ್ದಾರೆ. ಮತ್ತೆ ಕೆಲವು ಕಡೆ ಹಣದ ರೂಪದಲ್ಲೂ ಬೆಟ್ಟಿಂಗ್ ನಡೆಯುತ್ತಿದೆ. ತಿಪಟೂರು, ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ಗುಬ್ಬಿ ಕ್ಷೇತ್ರಗಳಲ್ಲೂ ಕೂಡ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆಯುತ್ತಿದೆ.
ಫಲಿತಾಂಶದ ಬಗ್ಗೆ ಚರ್ಚೆ: ಈಗ ಚುನಾವಣೆ ಮುಗಿದು ಇನ್ನೇನು ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿರುವುದರ ಜತೆಗೆ ಯಾವ ಅಭ್ಯರ್ಥಿ ಗೆಲ್ಲುತ್ತಾರೆ, ಯಾರಿಗೆ ಬಹುಮತ ಸಿಗುತ್ತೆ, ಯಾರು ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಬಗ್ಗೆ ಈಗಾಗಲೇ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರ ಬರುತ್ತೋ, ಅಥವಾ ಒಂದೇ ಪಕ್ಷ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬರುತ್ತದೆಯೇ ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈಗಾಗಲೇ ಐದು ಬಾರಿ ಗೆದ್ದಿರುವ ಟಿ.ಬಿ. ಜಯಚಂದ್ರ 6ನೇ ಬಾರಿಗೆ ಗೆಲ್ಲುತ್ತಾರೋ, ನಾಲ್ಕು ಬಾರಿ ಗೆದ್ದಿರುವ ಪರಮೇಶ್ವರ್ ಐದನೇ ಬಾರಿ ಗೆಲ್ಲುತ್ತಾರೋ, ಸತತ ನಾಲ್ಕು ಬಾರಿ ಜಯಬೇರಿ ಬಾರಿಸಿರುವ ಸೊಗಡು ಶಿವಣ್ಣ ಗೆಲವಿನ ಓಟ ಮುಂದುವರೆಸುತ್ತಾರೋ ಎಂಬ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ತುಮಕೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಹೊಟೇಲ್, ಊರಿನ ಸರ್ಕಲ್, ಚಹದಂಗಡಿ, ಹೀಗೆ ಎಲ್ಲೆಡೆ ಫಲಿತಾಂಶದ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಫಲಿತಾಂಶಕ್ಕೆ ಇನ್ನು 2 ದಿನ ಇರುವಾಗಲೇ ಜನ ಮಾತ್ರ ಇನ್ನು ಫಲಿತಾಂಶಕ್ಕೆ ಕುತೂಹಲ ಹಿಡಿದುಕೊಂಡು ಕಾಯುತ್ತಿದ್ದಾರೆ.