ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ 6ನೇ ಸ್ಥಾನ

Rashmi Kasaragodu
Updated On : 7 May 2013, 12:00 pm

ಕ.ಪ್ರ.ವಾರ್ತೆ, ತುಮಕೂರು, ಮೇ 6
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ತೋರಿದೆ.
ಕಳೆದ ಬಾರಿ 29 ನೇ ಸ್ಥಾನ ಪಡೆದಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆ 6ನೇ ಸ್ಥಾನ ಪಡೆಯುವ ಮೂಲಕ 23 ಸ್ಥಾನ ಮುನ್ನಡೆ ಸಾಧಿಸಿದೆ.
ತುಮಕುರು ಕಂದಾಯ ಜಿಲ್ಲೆಯಲ್ಲಿ 10 ತಾಲೂಕುಗಳಿದ್ದು, ಭೌಗೋಳಿಕವಾಗಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಶೈಕ್ಷಣಿಕವಾಗಿ 2 ಭಾಗಗಳಾನ್ನಾಗಿಸಿ ತುಮಕೂರು ಉತ್ತರ ಮತ್ತು ದಕ್ಷಿಣವೆಂದು ವಿಭಜಿಸಲಾಗಿದೆ.
ತುಮಕೂರು ಉತ್ತರವನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆ ಎಂದು ಕರೆಯುತ್ತಾರೆ. ತುಮಕೂರು ದಕ್ಷಿಣ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶವು ಕಳೆದ ಬಾರಿ 4 ನೇ ಸ್ಥಾನ ಪಡೆದಿದ್ದು ಈ ಬಾರಿ 10 ನೇ ಸ್ಥಾನ ಪಡೆದು 6 ಸ್ಥಾನ ಕುಸಿದಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಕೊರಟಗೆರೆ, ಅಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಾಲೂಕುಗಳಾದ ಪಾವಗಡ, ಶಿರಾ ಹಾಗೂ ಮಧುಗಿರಿ ಸೇರಿವೆ.
ಭಾರಿ ವ್ಯತ್ಯಾಸ: ಅದರೆ ಎಸ್.ಎಸ್.ಎಲ್.ಸಿ  ಫಲಿತಾಂಶದಲ್ಲಿ ಕಡಿಮೆ ತಾಲೂಕುಗಳನ್ನು ಹೊಂದಿರುವ ಮಧುಗಿರಿ ಶೈಕ್ಷಣಿಕ ಜಿಲ್ಲೆ ಅತಿ ಹೆಚ್ಚು ತಾಲೂಕು ಹೊಂದಿರುವ ತುಮಕೂರು ದಕ್ಷಿಣ ಜಿಲ್ಲೆಗೆ ಹೋಲಿಸಿಕೊಂಡರೆ ಭಾರಿ ವ್ಯತ್ಯಾಸ ಕಂಡು ಬಂದಿದೆ. ಅದರೆ ತುಮಕೂರು ದ. ಜಿಲ್ಲೆಯಲ್ಲಿ ಬರುವ ತಾಲೂಕುಗಳಲ್ಲಿನ ಗ್ರಾಮಗಳಿಗಿಂತ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಗ್ರಾಮಗಳಿಂದ ಕೂಡಿದೆ. ಅಂಕಿ ಅಂಶಗಳ ಪ್ರಕಾರ ಮಧುಗಿರಿ ಶೈಕ್ಷಣಿಕ ಜಿಲ್ಲೆಯೊಂದರಲ್ಲೇ 1.5 ಸಾವಿರಕ್ಕೂ ಹೆಚ್ಚು ಗ್ರಾಮಗಳಿವೆ. ಈ ಗ್ರಾಮಗಳಲ್ಲಿ 1 ಸಾವಿರಕ್ಕೂ ಹೆಚ್ಚು ಗ್ರಾಮಗಳು ಅಂಧ್ರ ಗಡಿ ಭಾಗದಲ್ಲಿವೆ. ಇಲ್ಲಿನ ವ್ಯವಹಾರಿಕ ಮತ್ತು ಮಾತೃ ಭಾಷೆ ತೆಲುಗು ಆಗಿದೆ.
ಡಿ.ಡಿ.ಪಿ.ಐ. ಟಿ.ಎಸ್. ಅಂಜಿನಪ್ಪನವರ ಪ್ರಕಾರ ಎಸ್.ಎಸ್.ಎಲ್.ಸಿ.ಗೆ ಪ್ರವೇಶ ಪಡೆಯುವ ಮುನ್ನಾ ಆ ವಿದ್ಯಾರ್ಥಿಯ ಹಿಂದಿನ ತರಗತಿಗಳಲ್ಲಿನ ಕಲಿಕಾ ಸಾಮರ್ಥ್ಯವನ್ನು ಶಿಕ್ಷಕರು ಮೊದಲು ಅರಿಯಬೇಕಾಗಿದೆ.
 ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ ಹಲವು ಒತ್ತಡಗಳಿಗೆ ಒಳಗಾಗಿ ಫೇಲ್ ಆಗುವ ವಿದ್ಯಾರ್ಥಿಗಳನ್ನು 9ನೇ ತರಗತಿಯಿಂದ ಉತ್ತೀರ್ಣ ಮಾಡುವ ಪ್ರಕರಣಗಳು ಹೆಚ್ಚಾಗಿದ್ದವು. ಪರೀಕ್ಷೆಯಲ್ಲಿ ನಕಲಿಗೆ ಅವಕಾಶ ನೀಡದೆ ಗುಣಾತ್ಮಾಕ ಫಲಿತಾಂಶಕ್ಕೆ ಹೆಚ್ಚು ಒತ್ತು ನೀಡದ್ದರಿಂದ ಉತ್ತಮ ಫಲಿತಾಂಶ ದೊರೆತಿರುವುದಕ್ಕೆ ಸಂತಸ ವಾಗುತ್ತಿದೆ ಎಂದರು.
ವಿಶೇಷ ತರಗತಿ: ಸರಣಿ ಪರೀಕ್ಷೆಯನ್ನು ಕೈಗೊಂಡು ಶೈಕ್ಷಣಿಕ ವರ್ಷದಲ್ಲಿ 6 ಬಾರಿ ಪರೀಕ್ಷೆಗಳು ನಡೆಸಿ 25 ರಿಂದ 35 ಅಂಕಗಳು ಪಡೆದ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆಯಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಯಿತು. ಪೋಷಕರ ಸಭೆ, ವಿಷಯ ಪರಿವೀಕ್ಷಕರಿಂದ ತಿಂಗಳಿಗೊಮ್ಮೆ ಪರೀಕ್ಷಾ ತಯಾರಿಗೆ ಬೇಕಾದ ವಿಷಯಗಳನ್ನು ಶಿಕ್ಷಕರಿಗೆ ವಿಷಯ ಸಂಘದ ಮೂಲಕ ತಿಳಿಸಿಕೊಡಲಾಗುತ್ತಿತ್ತು. ಡಿಡಿಪಿಐರವರು ಪರಿವೀಕ್ಷಣೆಗೆ ತೆರಳಿದ ವೇಳೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ  ಬೋಧನೆ ಮಾಡಿದ್ದು, ಶಿಕ್ಷಕರಿಗೆ ಉತ್ತೇಜನ ದೊರೆತಂತಾಯಿತು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್. ರಾಮಕೃಷ್ಣಯ್ಯ ಅವರ ಪ್ರಕಾರ ಗಡಿ ಭಾಗದ ಶಾಲೆಗಳಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕೇಳುವುದು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು.
ವಿದ್ಯಾರ್ಥಿಗಳಿಂದ ಸೆಮಿನಾರ್ ನಡೆಸುವುದು, ಗುಂಪು ಚರ್ಚೆಯಲ್ಲಿ ತೊಡಗಿಸುವುದರಿಂದಾಗಿ ಪರೀಕ್ಷೆಯ ಭಯ ವಿದ್ಯಾರ್ಥಿಗಳಲ್ಲಿ ಮಾಯವಾಗಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿದರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement