ವಿಜಯ ಮಾಲೆ ಯಾರಿಗೆ?
ತಿಪಟೂರು: ಜಾತಿ, ಹಣ, ಹೆಂಡದ ಕರಿ ನೆರಳಿನಲ್ಲಿ ಮುಗಿದಿರುವ ತಿಪಟೂರು ವಿಧಾನಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ವಿಜಯಮಾಲೆ ಯಾರ ಪಾಲಾಗುತ್ತಿದೆ ಎಂಬುದಕ್ಕೆ ಕ್ಷಣಗಣನೆ ಆರಂಭವಾಗಿದೆ. ತಿಪಟೂರು ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಶೇ.81ರಷ್ಟು ನಡೆದಿದ್ದು, ಗೆಲವಿಗಾಗಿ ಕೆಜೆಪಿ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮತದಾರರ ತೀರ್ಮಾನವೇ ಅಂತಿಮವಾಗಿರುವುದರಿಂದ ಮತ ಎಣಿಕೆಯ ಕ್ಷಣಗಣನೆ ತೀವ್ರ ಕುತೂಹಲ ಉಂಟುಮಾಡಿದೆ. ಮತದಾರರನ್ನು ಒಲಿಸಿಕೊಳ್ಳಲು ಪ್ರಮುಖ ರಾಜಕೀಯ ಪಕ್ಷಗಳು ತಾಲೂಕಿನಾದ್ಯಂತ ಯಥೇಚ್ಛವಾಗಿ ಹಣ, ಹೆಂಡದ ಹೊಳೆಯನ್ನೇ ಹರಿಸಿವೆ. ಒಟ್ಟಾರೆ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.