ಇಂದು ಚುನಾವಣಾ ಫಲಿತಾಂಶ...
ವಿವಿಧೆಡೆ ಬೆಟ್ಟಿಂಗ್ ಅಬ್ಬರ ಜೋರು
ಕ.ಪ್ರ.ವಾರ್ತೆ ಕುಣಿಗಲ್ ಮೇ 7
ಬುಧವಾರದಂದು ಇವಿಎಂ ಮತಯಂತ್ರಗಳಲ್ಲಿ ಭದ್ರವಾಗಿರುವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಪ್ರಕಟವಾಗುವ ಮುನ್ನ, ತಾಲೂಕಿನ ವಿವಿಧೆಡೆಯಲ್ಲಿ ಗೆಲ್ಲುವ ಅಭ್ಯರ್ಥಿಯ ಕುರಿತು ಹಾಗೂ ಗೆಲ್ಲುವ ಅಭ್ಯರ್ಥಿಗಳ ಕಾಲೆಳೆಯುವ ತಾಕತ್ತಿರುವ ಪಕ್ಷೇತರ ಅಭ್ಯರ್ಥಿಯ ಕುರಿತು ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.
ಬಿಜೆಪಿ ಹೊರತುಪಡಿಸಿ ಗೊಂದಲದ ಗೂಡಿನ ಪರಿಸ್ಥಿತಿಯಲ್ಲೆ ಚುನಾವಣೆ ಪೂರೈಸಿದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ, ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಚುನಾವಣೆ ಎದುರಿಸಿದ ಖ್ಯಾತಿ ಹೊಂದಿರುವ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸಹ ಬೆಟ್ಟಿಂಗ್ದಾರರ ಫೇವರಿಟ್ ಆಗಿದ್ದಾರೆ. ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳ ನಡುವಿನ ಸಹೋದರರ ಸವಾಲ್ ನಡುವೆ, ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಕಾಂಗ್ರೆಸ್ ಅಭ್ಯರ್ಥಿಯ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ.
ಮೂರು ಪಕ್ಷಗಳ ಮತಬೇಟೆಯ ವೇಗಕ್ಕೆ ಕಡಿವಾಣ ಹಾಕುವಂತೆ ತಡೆಯೊಡ್ಡುತ್ತಿರುವ ಆಟೋ ರಿಕ್ಷಾ (ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಚಿಹ್ನೆ) ಪಡೆಯುವ ಒಟ್ಟಾರೆ ಮತಗಳ ಮೇಲೂ ಬೆಟ್ಟಿಂಗ್ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಗೆಲವಿನ ಪರ ಬೆಟ್ಟಿಂಗ್ ಒಂದಕ್ಕೆ ಎರಡು ನಡೆಯುತ್ತಾ ಬಿರುಸಿನಲ್ಲಿದ್ದರೆ, ತೆನೆಹೊತ್ತ ಮಹಿಳೆ ಅಭ್ಯರ್ಥಿಯ ಗೆಲವಿನ ಮೇಲೆ ಒಂದಕ್ಕೆ ಒಂದು, ಕಾಂಗ್ರೆಸ್ ಅಭ್ಯರ್ಥಿಯ ಗೆಲವಿನ ಮೇಲೂ ಒಂದಕ್ಕೆ ಒಂದು ಬೆಟ್ಟಿಂಗ್ ನಡೆಯುತ್ತಿದೆ.