ಎಸ್.ಎನ್. ಜ್ಯೋತಿ ಜಿಲ್ಲೆಗೆ ಪ್ರಥಮ ಸ್ಥಾನ
ಶಿರಾ: ಪಟ್ಟಣದ ಶ್ರೀ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಎಸ್.ಎನ್.ಜ್ಯೋತಿ ಕಳೆದ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 92.50 (555) ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕುಗ್ರಾಮ ಶಾಗದಡು ಗ್ರಾಮದಲ್ಲಿ ಕಡು ಬಡತನದಲ್ಲಿ ಟಿ ಅಂಗಡಿ ನಡೆಸುತ್ತಿರುವ ಪಿ.ಲಿಂಗಪ್ಪ ಮತ್ತು ಲಕ್ಷ್ಮೀದೇವಮ್ಮ ದಂಪತಿ ಮಗಳಾದ ಜ್ಯೋತಿ ದ್ವಿತೀಯ ಪಿಯುಸಿಯಲ್ಲಿ ಕನ್ನಡದಲ್ಲಿ 96, ಇಂಗ್ಲಿಷ್ 90, ಇತಿಹಾಸ 91, ಅರ್ಥಶಾಸ್ತ್ರ 90, ರಾಜ್ಯಶಾಸ್ತ್ರ 91, ಸಮಾಜ ಶಾಸ್ತ್ರ 97 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಕೆ.ಎ.ಎಸ್ ಓದಬೇಕೆಂಬ ಹಂಬಲ ಹೊಂದಿರುವ ಎಸ್. ಎನ್.ಜ್ಯೋತಿ ಪ್ರತಿನಿತ್ಯ ಬೆಳಿಗ್ಗೆ 4-30 ರಿಂದ 6-30 ರವರೆಗೆ ವ್ಯಾಸಂಗ ಮಾಡುವುದು ರಾತ್ರಿ 7 ರಿಂದ 10-30 ವ್ಯಾಸಂಗ ಮಾಡುವುದು ಇವರ ಹವ್ಯಾಸವಾಗಿದೆ. ಇದರ ಜೊತೆಗೆ ತಂದೆ ತಾಯಿಗಳ ಗೃಹ ಕೃತ್ಯದಲ್ಲೂ ಭಾಗಿಯಾಗುತ್ತಿದ್ದಳು. ತಮ್ಮ ಈ ಸಾಧನೆಗೆ ಕಾಲೇಜಿನ ಗುರುಗಳು ಹಾಗೂ ತಂದೆ ತಾಯಿಗಳ ಪ್ರೋತ್ಸಾಹ ಸಹಕಾರಿಯಾಯಿತು ಎಂದು ಹೇಳುವ ಜ್ಯೋತಿ ಮುಂದೆಯೂ ಇವರ ಸಹಕಾರ ತಮಗೆ ಅತ್ಯಮೂಲ್ಯವಾದುದು ಎಂದರು.