ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೈಕೊಟ್ಟ ಮಳೆ: ಬೆಂಕಿಯಿಂದ ಬಾಣಲೆಗೆ ರೈತರ ಬದುಕು

Rashmi Kasaragodu
Updated On : 8 May 2013, 12:06 pm

ತಿಪಟೂರು: ಕಲ್ಪತರು ನಾಡಿನಲ್ಲಿ ಕೆಂಡದಂತಹ ಉರಿಬಿಸಿಲು ಕಾರುತ್ತಿದ್ದು, ಈವರೆಗೂ ಮಳೆ ಇಲ್ಲದೆ ರೈತರು ಕಂಗಾಲಾಗಿ ಆಕಾಶದೆಡೆಗೆ ಹತಾಶಭಾವದಿಂದ ನೋಡುತ್ತಾ ಮಳೆರಾಯ ಯಾವಾಗ ಕೃಪೆ ತೋರುವನೋ ಎಂಬ ಚಿಂತೆಯಲ್ಲಿದ್ದು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
 ಇತ್ತೀಚಿನ ಹಲವಾರು ವರ್ಷಗಳಲ್ಲಿ ತಾಲೂಕಿಗೆ ಸುರಿದಿರುವ ಮಳೆ ಪ್ರಮಾಣ ಲೆಕ್ಕ ಹಾಕಿ ನೋಡಿದರೆ ವರ್ಷ ವರ್ಷವೂ ಇಳಿಕೆಯಾಗುವ ಮೂಲಕ ನಿರಂತರವಾಗಿ ಭೀಕರ ಬರಗಾಲ ಎದುರಾಗಿದ್ದು, ಈ ವರ್ಷವೂ
ತಾಲೂಕಿನಾದ್ಯಂತ ಭಯಾನಕ ಸನ್ನಿವೇಶ ಸೃಷ್ಟಿಯಾಗಿದೆ.
ಮೇವಿಗೆ ಬರ: ತಾಲೂಕಿನಲ್ಲಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬಿಟ್ಟರೆ, ಇಲ್ಲಿನ ರೈತರ ಪ್ರಮುಖ ಉಪಕಸುಬೆಂದರೆ ಪಶುಸಂಗೋಪನೆ. ಆದರೆ ಪಶುಸಂಗೋಪನೆಗೆ ಪ್ರಮುಖವಾಗಿ ರಾಗಿ ಹುಲ್ಲು ಅಗತ್ಯವಾಗಿದೆ. ಮಳೆರಾಯನ ಮುನಿಸಿನಿಂದ ಕಳೆದ ಬಾರಿಯಂತೆ ಈ ವರ್ಷವೂ ದನಕರುಗಳಿಗೂ ಮೇವಿಲ್ಲದಂತಾಗಿರುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿರುವುದರಿಂದ ರೈತರು ಗಾಬರಿ ಬೀಳುವಂತಾಗಿದೆ. ಈಗಾಗಲೆ ದನಕರುಗಳು, ಕುರಿ ಮೇಕೆಗಳನ್ನು ಮೇಯಿಸಲು ಬದುಗಳಲ್ಲಾಗಲಿ, ಕೆರೆ ಅಂಗಳಗಳಲ್ಲಾಗಲಿ ಹಸಿರು ಮೇವು ಬಾರದೆ ಭೀಕರ ಬರಗಾಲ ಎದುರಿಸುವಂತಾಗಿದೆ.
ನೀರಿಗೆ ಸಂಚಕಾರ: ತಾಲೂಕಿನ ಬಹುತೇಕ ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಸಹಜವಾಗಿಯೇ ಅಂತರ್ ಜಲದ ಕೊರತೆ ಎದುರಾಗಿದೆ. ಹಲವಾರು ಬೋರ್ಗಳಲ್ಲಿ ನೀರಿಲ್ಲದೆ ನಿಂತು ಹೋಗಿವೆ. ಕಳೆದ ಹತ್ತಾರು ವರ್ಷಗಳಿಂದ ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಏಕೈಕ ಆಸರೆ ಎಂದರೆ ಬೋರ್ವೆಲ್ಗಳು ಮಾತ್ರ. ಮುಂದಿನ 15-20 ದಿನಗಳಲ್ಲಿ ಮಳೆರಾಯ ಕೃಪೆ ತೋರದಿದ್ದರೆ ಬಹುತೇಕ ಗ್ರಾಮಗಳ ಬೋರ್ವೆಲ್ಗಳಲ್ಲಿ ಅಂತರ್ ಜಲದ ಕೊರತೆ ಎದುರಾಗುವುದಲ್ಲದೆ ಗ್ರಾಮೀಣ ಜನರ ಬದುಕು ಬೆಂಕಿಯಿಂದ ಬಾಣಲೆಗೆ ಎಸೆದಂತಾಗುವುದು ನಿಶ್ಚಿತ ಎಂಬುದು ರೈತರಲ್ಲಿ ದುಗುಡ ಹುಟ್ಟಿಸಿದೆ.
ವಿನಾಶದಂಚಿನಲ್ಲಿ ತೆಂಗು:  ಹತ್ತಾರು ವರ್ಷಗಳಿಂದ ಬರದ ಛಾಯೆಗೆ ಸಿಲುಕಿದ್ದ ತಾಲೂಕಿನ ತೆಂಗು ಬೆಳೆ ಇತ್ತೀಚೆಗಂತೂ ಬರ ಸೇರಿದಂತೆ ನಾನಾ ರೋಗಗಳಿಗೆ ತುತ್ತಾಗಿದ್ದು, ತೆಂಗು ಬೆಳೆಗಾರರು ದಿಕ್ಕೆಡುವಂತೆ ಮಾಡಿದೆ. ತಾಲೂಕಿನ ನೂರಾರು ಗ್ರಾಮಗಳಲ್ಲಿ ಸಾವಿರಾರು ತೆಂಗಿನ ಮರಗಳು, ಅಡಿಕೆ ಮರಗಳು ಈಗಾಗಲೆ ಒಣಗಿ ಸುಳಿ ಬಿದ್ದು ಹೋಗಿದ್ದು ಬೆಳೆಗಾರರು ದಿಕ್ಕೆಡುವಂತಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement