ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬೇಸಿಗೆ ಶಿಬಿರ ಸಹಕಾರಿ
ಕ.ಪ್ರ. ವಾರ್ತೆ ಕುಣಿಗಲ್ ಮೇ 7
ಸದಾ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗುವ ಎಳೆಯ ವಯಸ್ಸಿನ ಮಕ್ಕಳಿಗೆ ಮನೋಲ್ಲಾಸ, ಬೌದ್ಧಿಕ ವಿಕಸನ ರೂಪಿಸುವ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ, ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಅರವಿಂದ ಇಂಟರ್ನ್ಯಾಷನಲ್ ಸ್ಕೂಲ್ನ ಅಧ್ಯಕ್ಷ ಎಂ.ಕೆ. ಅಶೋಕ್ ತಿಳಿಸಿದರು.
ಪಟ್ಟಣದ ಗಿರಿಗೌಡನಪಾಳ್ಯದ ಅರವಿಂದ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಹಾಗೂ ಮಕ್ಕಳ ನಗೆಕೂಟ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಉಲ್ಲಾಸಕರ ವಾತಾವರಣ ನಿರ್ಮಾಣ ಮಾಡಿದಾಗ ಮಾತ್ರ ಅವರು ಮುಕ್ತ ಮನಸ್ಸಿನಿಂದ ತಮಗಿಷ್ಟವಾದ ವಿಷಯಗಳ ಬಗ್ಗೆ ಆಸಕ್ತಿ ಹೊಂದಿ ಅಧ್ಯಯನಶೀಲರಾಗುತ್ತಾರೆ. ಯಾವುದೇ ವಿಷಯದಲ್ಲೂ ಮಕ್ಕಳ ಮೇಲೆ ಬಲವಂತದ ಒತ್ತಡ ಸಲ್ಲ ಎಂದರು. ಖ್ಯಾತ ಹಾಸ್ಯಕಲಾವಿದ ಪ್ರೊ.ಕೃಷ್ಣೇಗೌಡ, ಪ್ರಸ್ತುತ ದಿನಗಳಲ್ಲಿ ಎಳೆಯ ವಯಸ್ಸಿನ ಮಕ್ಕಳ ಮೇಲೆ ಪೋಷಕರು ತಮ್ಮ ಪ್ರತಿಷ್ಠೆಗಾಗಿ ಅವುಗಳ ಬುದ್ಧಿಮತ್ತೆ ಮೀರಿದ ಒತ್ತಡ ಹಾಕುತ್ತಿರುವುದು ನಿಜಕ್ಕೂ ಖಂಡನೀಯ. ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆಬಾರದ ರೀತಿಯಲ್ಲಿ ಅವರು ಬಾಲ್ಯವನ್ನು ಸ್ವಚ್ಛಂದವಾಗಿ ಅನುಭವಿಸುವ ಮುಕ್ತ ಪರಿಸರ ನಿರ್ಮಿಸುವ ಜೊತೆಯಲ್ಲಿ ಅವರಿಗೆ ಪ್ರೀತಿ, ಸ್ನೇಹ ಪೂರ್ವಕವಾಗಿ ತಿಳಿಹೇಳುವ ಮೂಲಕ ಅವರಲ್ಲಿ ಕಲಿಕ ಸಾಮರ್ಥ್ಯ ವೃದ್ಧಿಸಬೇಕಿದೆ ಎಂದರು. ಹಾಸ್ಯಕಲಾವಿದರಾದ ರಿಚರ್ಡ್ ಲೂಯಿಸ್, ಮೈಸೂರು ಅನಂದ್, ಜೋಷಿ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು, ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು, ಪ್ರಾಚಾರ್ಯೆ ಪದ್ಮಲತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.