ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಾಸಮರಕ್ಕೆ ಬೀಳಲಿದೆ ಬ್ರೇಕ್

Rashmi Kasaragodu
Updated On : 8 May 2013, 12:04 pm

ಕ.ಪ್ರ. ವಾರ್ತೆ  ತುಮಕೂರು  ಮೇ 7
ವಿಧಾನಸಭೆಗೆ ನಡೆದ ಚುನಾವಣೆಯ ಮಹಾಸಮರ ಕ್ಲೈ ಮ್ಯಾಕ್ಸ್ ಹಂತ ತಲುಪಿದ್ದು ಬುಧವಾರ ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಹೊರಬೀಳಲಿದೆ.
ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ತುಮಕೂರಿನ ಪಾಲಿಟೆಕ್ನಿಕ್ ಹಾಗೂ ಡಿಪ್ಲೊಮಾ ಕಾಲೇಜಿನಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಸಮ್ಮುಖದಲ್ಲಿ ಮತಎಣಿಕೆ ಕಾರ್ಯ ಆರಂಭವಾಗಲಿದೆ. ಮೊದಲಿಗೆ ಪೋಸ್ಟಲ್ ಮತಗಳನ್ನು ಎಣಿಸಿ ನಂತರ ಮತಯಂತ್ರಗಳಿಗೆ ಬಿದ್ದಿರುವ ಮತಗಳನ್ನು ಎಣಿಸಲಾಗುವುದು.
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯ ಮೇಲಾಟದ ಅಂತಿಮ ಘಟಕ್ಕೆ ಈಗ ಬಂದು ತಲುಪಿದ್ದು ಬುಧವಾರ ಮಧ್ಯಾಹ್ನದೊಳಗೆ ಯಾವ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ ಎಂಬುದು ವೇದ್ಯವಾಗುತ್ತದೆ.
ಕಣದಲ್ಲಿ 148 ಅಭ್ಯರ್ಥಿಗಳು: ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರದಿಂದ ಎಲ್ಲಾ ರಾಜಕೀಯ ಪಕ್ಷ ಹಾಗೂ ಪಕ್ಷೇತರರು ಸೇರಿ 148 ಮಂದಿ ಕಣದಲ್ಲಿದ್ದಾರೆ. ಅವರಲ್ಲಿ ಯಾರು ಜಯಸಾಧಿಸುತ್ತಾರೆ ಯಾರು ಪರಾಭವಗೊಳ್ಳುತ್ತಾರೆ. ಯಾರಿಗೆ ಎಷ್ಟು ಮತ ಬಿದ್ದಿದೆ ಎಂಬೆಲ್ಲಾ ಸಂಗತಿಗಳು ಬುಧವಾರ ಮಧ್ಯಾಹ್ನ 2 ಗಂಟೆಗೆ ಬಹಿರಂಗಗೊಳ್ಳಲಿದೆ. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಿಂದ 20 ಲಕ್ಷ 21 ಸಾವಿರದ 626 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಶೇ. 79 ರಷ್ಟು ಮತದಾನವಾಗಿದೆ. ತುಮಕೂರು ನಗರ ಹೊರೆತುಪಡಿಸಿ ಮಿಕ್ಕ 10 ಕ್ಷೇತ್ರಗಳಲ್ಲಿ ಒಳ್ಳೆಯ ಮತದಾನವಾಗಿದೆ.
ಗಣ್ಯರ ಭವಿಷ್ಯ ಏನಾಗಲಿದೆ: ಕೆಪಿಸಿಸಿ ಚುಕ್ಕಾಣಿ ಹಿಡಿದಿರುವ ಡಾ. ಜಿ. ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ, ಮಾಜಿ ಸಚಿವರಾದ ಬಿ. ಸತ್ಯನಾರಾಯಣ್ ಹಾಗೂ ಡಿ. ನಾಗರಾಜಯ್ಯ ಅವರ ಭವಿಷ್ಯ ಕೂಡ ಬುಧವಾರ ಮಧ್ಯಾಹ್ನದೊಳಗೆ ನಿರ್ಧಾರವಾಗಲಿದೆ.
ಬಿಗಿ ಬಂದೋಬಸ್ತ್: ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ತುಮಕೂರು ಕೇಂದ್ರದಲ್ಲಿ ನಡೆಯುವುದರಿಂದ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಭ್ಯರ್ಥಿ ಪರ ವಿಜಯೋತ್ಸವಕ್ಕೆ ಕೆಲ ನಿರ್ಬಂಧಗಳನ್ನು ಹಾಕಲಾಗಿದೆ. ಮತಎಣಿಕೆ ಕೇಂದ್ರ ಸುತ್ತ ಯಾರಿಗೂ ಪ್ರವೇಶವಿಲ್ಲ. ಅಲ್ಲದೇ ಮತಎಣಿಕೆ ಏಜೆಂಟರು, ಅಭ್ಯರ್ಥಿಗಳನ್ನು ಮಾತ್ರ ಮತಎಣಿಕೆ ಕೇಂದ್ರದತ್ತ ಬಿಡಲಾಗುವುದು. ಪ್ರತಿ ಅರ್ಧ ಗಂಟೆಗೊಮ್ಮೆ ಫಲಿತಾಂಶವನ್ನು ಮೈಕ್ ಮೂಲಕ ಕಾರ್ಯಕರ್ತರಿಗೆ ತಿಳಿಸಲಾಗುವುದು.
ಮದ್ಯದಂಗಡಿ ಬಂದ್: ಮತಎಣಿಕೆ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಮುಚ್ಚಿ ಆದೇಶ ಹೊರಡಿಸಲಾಗಿದೆ. ಮುಕ್ತ ಹಾಗೂ ನಿರ್ಭಿತ ಚುನಾವಣೆ ನಡೆಸಿರುವ ಜಿಲ್ಲಾಡಳಿತ ಮತಎಣಿಕೆಯನ್ನು ಸಹ ಅಷ್ಟೆ ಸುಸೂತ್ರವಾಗಿ ನಡೆಸುವ ಜವಾಬ್ದಾರಿ ಹೊತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement