ವರದಕ್ಷಿಣೆ: ಪತಿ, ಅತ್ತೆ, ಮಾವ, ನಾದಿನಿಗೆ ಜೈಲು
ಕ.ಪ್ರ.ವಾರ್ತೆ ಮಂಡ್ಯ ಮೇ 7
ವರದಕ್ಷಿಣೆ ತರುವಂತೆ ಮಹಿಳೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊಲೆ ಮಾಡಿದ್ದ ಪತಿ, ಅತ್ತೆ, ಮಾವ ಹಾಗೂ ನಾದಿನಿಗೆ ಇಲ್ಲಿನ 1ನೇ ತ್ವರಿತ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಸೂನಗನಹಳ್ಳಿ ಗ್ರಾಮದ ಚಿಕ್ಕೊನು ಚಿಕ್ಕಣ್ಣ, ಈತನ ಪತ್ನಿ ಜಯಮ್ಮ, ಪುತ್ರ ಅಶೋಕ್, ಪುತ್ರಿ ಹೇಮಾವತಿ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ವಳಂಬಿಗೆ ಗ್ರಾಮದ ನಂಜೇಗೌಡ ಅವರ ಪುತ್ರಿ ರೇಣುಕಾ ಮತ್ತು ಸೂನಗನಹಳ್ಳಿ ಗ್ರಾಮದ ಅಶೋಕ್ ಅವರ ವಿವಾಹ 2005ರ ಜೂನ್ 19ರಂದು ನೆರವೇರಿತ್ತು.
ಮದುವೆ ಸಂದರ್ಭದಲ್ಲಿ ರೇಣುಕಾ ಮನೆಯವರು ಅಶೋಕ್ ಅವರಿಗೆ ಸಾಕಷ್ಟು ವರದಕ್ಷಿಣೆ ನೀಡಿದ್ದರು.
ಮದುವೆಯಾದ ಕೆಲ ತಿಂಗಳಲ್ಲಿಯೇ ಅಶೋಕ್ನ ತಂದೆ, ತಾಯಿ ಮತ್ತು ಸಹೋದರಿ 50000 ವರದಕ್ಷಿಣೆ ತರುವಂತೆ ರೇಣುಕಾ ಅವರನ್ನು ಪೀಡಿಸುತ್ತಿದ್ದರು. 2006ರ ಡಿಸೆಂಬರ್ 9ರಂದು ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಆರೋಪಿಗಳು ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿ ರೇಣುಕಾ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಮೃತ ರೇಣುಕಾ ಸಹೋದರ ಸ್ವಾಮಿ, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಪ್ರಕರಣದ ತನಿಖೆ ನಡೆಸಿದ ಸಿಓಡಿ ಎಸ್ಪಿ ರಾಚಪ್ಪ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಒಂದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಸುರೇಶ್ ಎಸ್.ಕೋಗಿಲಗೇರಿ ಅವರು, ಆರೋಪಿಗಳಾದ ಅಶೋಕ್ನಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 22000 ದಂಡ, ಜಯಮ್ಮ ಅವರಿಗೆ 3 ವರ್ಷ ಕಠಿಣ ಶಿಕ್ಷೆ, 5000 ದಂಡ, ಚಿಕ್ಕೊನು ಚಿಕ್ಕಣ್ಣನಿಗೆ 6 ತಿಂಗಳು ಸಾದಾ ಶಿಕ್ಷೆ, 2000 ದಂಡ ಹಾಗೂ ಹೇಮಾವತಿಗೆ 6 ತಿಂಗಳ ಕಠಿಣ ಶಿಕ್ಷೆ, 2000 ದಂಡ ಹಾಗೂ ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ.