ಸೋಲು ಗೆಲವಿನ ಲೆಕ್ಕಾಚಾರ ಇಂದು ಬಹಿರಂಗ
ಹುಳಿಯಾರು: ರಾಜ್ಯದಲ್ಲಿ ಮೇ 5 ರಂದು ನಡೆದ 223 ಕ್ಷೇತ್ರಗಳ ವಿಧಾನ ಸಭಾ ಚುನಾವಣೆಗಳ ಫಲಿತಾಂಶ ಇಂದು ಹೊರಬೀಳಲಿದ್ದು, ಕಣದಲ್ಲಿದ್ದ ಅಭ್ಯರ್ಥಿಗಳ ಹಾಗೂ ಮತದಾರರ ಕೌತುಕಕ್ಕೆ ಇಂದು ತೆರೆಬೀಳಲಿದೆ. ಅಂತೆಯೇ ಚಿ.ನಾ.ಹಳ್ಳಿ ವಿಧಾನಸಭ ಕ್ಷೇತ್ರದ ಕಣದಲ್ಲಿದ್ದ 11 ಅಭ್ಯರ್ಥಿಗಳ ಸೋಲು- ಗೆಲವಿನ ಲೆಕ್ಕಾಚಾರ ಬುಧವಾರ ತಿಳಿಯಲಿದೆ. ಪ್ರತಿ ಹಳ್ಳಿ ಹಳ್ಳಿಗಳ ಮನೆಯ ಜಗಲಿಕಟ್ಟೆ, ಅರಳ್ಳಿಕಟ್ಟೆ, ಬಸ್ ನಿಲ್ದಾಣ, ಟೀ ಅಂಗಡಿಗಳ ಸಮೀಪದಲ್ಲಿ ಜನರ ಗುಜುಗುಜು ಯಾವ ಪಕ್ಷ ಗೆಲ್ಲುತ್ತೆ, ಯಾರು ತಮ್ಮ ಕ್ಷೇತ್ರದಲ್ಲಿ ಎಂಎಲ್ಎ ಆಗುತ್ತಾರೆ ಎಂದು ಮಾತಾಡುವುದು ಕೇಳಿ ಬರುತ್ತಿತ್ತು. ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಪ್ರಭಾವಿ ನಾಯಕರುಗಳಾದ ಜೆಡಿಎಸ್ನ ಸುರೇಶ್ ಬಾಬು, ಬಿಜೆಪಿಯ ಕಿರಣ್ಕುಮಾರ್, ಕೆಜೆಪಿಯ ಮಾಧುಸ್ವಾಮಿ ನಡುವೆ ತೀವ್ರ ಪೈಪೋಟಿಯಿದ್ದು, ಈ ಮೂವರು ತಾಲೂಕಿನಲ್ಲಿ ಹೆಚ್ಚಿನ ಸದ್ದು ಮಾಡಿದ್ದು ಪ್ರತಿ ಗ್ರಾಮಗಳಿಗೆ ತೆರಳಿ ತಂತಮ್ಮ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ್ದಾರೆ. ಒಟ್ಟಾರೆಯಾಗಿ ಚಿ.ನಾ.ಹಳ್ಳಿ ಕ್ಷೇತ್ರದ ಆಡಳಿತದ ಅಧಿಕಾರದ ಚುಕ್ಕಾಣಿ ಯಾರ ಕೈ ಸೇರಲಿದೆ ಎಂಬುದನ್ನು ಮತದಾರ ತನ್ನ ಹಕ್ಕು ಚಲಾಯಿಸುವ ಮೂಲಕ ಈಗಾಗಲೇ ಗುರುತಿಸಿ ಮತಯಂತ್ರದಲ್ಲಿರಿಸಿದ್ದು ಅವುಗಳ ಏಣಿಕೆಯಿಂದ ಯಾರಿಗೆಷ್ಟು ಮತ, ಯಾವ ಪಕ್ಷದ ಕಡೆ ಮತದಾರನ ಒಲವು ವ್ಯಕ್ತವಾಗಿದೆ ಎಂಬುದು ತಿಳಿಯಲಿದೆ.