ಹಳೇ ದ್ವೇಷದ ಹಿನ್ನೆಲೆ; ವ್ಯಕ್ತಿಗೆ ಮಾರಣಾಂತಿಕ ಹಲ್ಲೆ
ಕ.ಪ್ರ.ವಾರ್ತೆ ಟಿ ಭಾರತೀನಗರ ಟಿ ಮೇ 7
ಹಳೇ ದ್ವೇಷದ ಹಿನ್ನೆಲೆಯಲ್ಲಿ ಚುನಾವಣಾ ಸಂದರ್ಭ ಬಳಕೆ ಮಾಡಿ ವ್ಯಕಿಯೋರ್ವನ ಮೇಲೆ ನಾಲ್ವರು ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಲ್ಲಿಗೆ ಸಮೀಪದ ಬನ್ನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ಬಿ.ಕೆ. ಸುರೇಶ್ ಬಿನ್ ಕಾಳೇಗೌಡ (30) ಎಂಬಾತನೆ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಸದ್ಯ ಈತ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮನೆಯ ಬಳಿ ಇದ್ದ ಬಿ.ಕೆ.ಸುರೇಶನನ್ನು ಇದ್ದಕ್ಕಿದ್ದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಮುಂದಾದ ಪುಟ್ಟಸ್ವಾಮಿ, ಕೃಷ್ಣ, ಮೂರ್ತಿ, ದೇವರಾಜು ಎಂಬವರು ಆನಂತರ ಮರದ ರಿಪೀಸ್ ಪಟ್ಟಿಯಿಂದ ಸುರೇಶನನ್ನು ಮಾರಣಾಂತಿಕವಾಗಿ ಥಳಿಸಿ, ಕಾಲಿನಿಂದ ತುಳಿದು ಎಳೆದಾಡಿದರು.
ಈ ಸಂದರ್ಭ ಚಿರಾಡುತ್ತಿದ್ದ ಈತನನ್ನು ಗ್ರಾಮದ ಕೆಲವರು ಒಡೆಯದಂತೆ ತಡೆದರಾದರೂ ಆ ವೇಳೆಗಾಗಲೇ ರಕ್ತಗಾಯಗಳಾಗಿದ್ದ ಆತನನ್ನು ತಕ್ಷಣವೇ ಮದ್ದೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಮದ್ದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಗಾಗಿ ಶೋಧ ಕಾರ್ಯ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.