ಜಿಲ್ಲೆಯಲ್ಲಿ ಕೋಟೆ ಕಟ್ಟಿದ ಜೆಡಿಎಸ್
ಹಳೇ ಮೈಸೂರು ಪ್ರಾಂತ್ಯದ ಶಕ್ತಿಶಾಲಿ ಜಿಲ್ಲೆಗಳಲ್ಲಿ ಒಂದಾದ ಕಲ್ಪತರು ನಾಡು ಎಂಬ ಖ್ಯಾತಿಗೆ ಪಾತ್ರವಾಗಿರುವ ತುಮಕೂರಿನಲ್ಲಿ ಜೆಡಿಎಸ್ ಪಾರುಪತ್ಯ ಮೆರೆದಿದೆ.
ತುಮಕೂರು: ಹಳೇ ಮೈಸೂರು ಪ್ರಾಂತ್ಯದ ಶಕ್ತಿಶಾಲಿ ಜಿಲ್ಲೆಗಳಲ್ಲಿ ಒಂದಾದ ಕಲ್ಪತರು ನಾಡು ಎಂಬ ಖ್ಯಾತಿಗೆ ಪಾತ್ರವಾಗಿರುವ ತುಮಕೂರಿನಲ್ಲಿ ಜೆಡಿಎಸ್ ಪಾರುಪತ್ಯ ಮೆರೆದಿದೆ.
ಈ ಬಾರಿ 6 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತುಮಕೂರು ಯಾವತ್ತೂ ಜೆಡಿಎಸ್ನ ಭದ್ರಕೋಟೆ ಎಂದು ಸಾಬೀತುಪಡಿಸಿತು.
ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ 13 ಕ್ಷೇತ್ರವಿದ್ದು ಅದರಲ್ಲಿ 11 ಸ್ಥಾನವನ್ನು ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ 4 ಕ್ಷೇತ್ರಗಳಿಗೆ ತೃಪ್ತಿಪಡಬೇಕಾಗಿತ್ತು. ಆದರೆ ಈ ಬಾರಿ 6 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ತನ್ನ ಶಕ್ತಿ ಮೆರೆದಿದೆ.
ಕುಣಿಗಲ್ನಿಂದ ಮಾಜಿ ಸಚಿವ ಡಿ. ನಾಗರಾಜಯ್ಯ, ಗುಬ್ಬಿಯಿಂದ ಎಸ್.ಆರ್. ಶ್ರೀನಿವಾಸ್ ಸತತ ಮೂರನೇ ಬಾರಿ, ಪಾವಗಡದಿಂದ ತಿಮ್ಮರಾಯಪ್ಪ, ಚಿಕ್ಕನಾಯಕನಹಳ್ಳಿಯಿಂದ ಸಿ.ಬಿ. ಸುರೇಶ್ಬಾಬು, ಕೊರಟಗೆರೆಯಿಂದ ಸುಧಾಕರ್ಲಾಲ್ ಹಾಗೂ ತುರುವೇಕೆರೆಯಿಂದ ಎಂ.ಟಿ. ಕೃಷ್ಣಪ್ಪ ಆಯ್ಕೆ ಆಗುವ ಮೂಲಕ ಜೆಡಿಎಸ್ ಅನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ.
ಪಾರುಪತ್ಯ: ಆರಂಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ 6 ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಜೆಡಿಎಸ್ ಏನಿದ್ದರೂ 3 ಕ್ಷೇತ್ರ ಮಾತ್ರ ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಎಲ್ಲಾ ನಿರೀಕ್ಷೆಗಳನ್ನು ಜೆಡಿಎಸ್ ಬುಡಮೇಲು ಮಾಡಿ ಪಾರುಪತ್ಯ ಮೆರೆದಿದೆ.
ಚಿಕ್ಕನಾಯಕನಹಳ್ಳಿಯಿಂದ ಸತತ ಎರಡು ಬಾರಿ ಯಾವುದೇ ಶಾಸಕ ಆಯ್ಕೆಯಾಗುವುದಿಲ್ಲ ಎಂಬ ನಂಬಿಕೆ ಇತ್ತು. ಈ ಹಿಂದೆ ಬಸವಯ್ಯ ಅವರು ಈ ಕೊಂಡಿಯನ್ನು ಮುರಿದಿದ್ದರು. ಈಗ ಸುರೇಶ್ಬಾಬು ಕೂಡ ಸತತ ಎರಡನೇ ಬಾರಿಗೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಇನ್ನು ತುರುವೇಕೆರೆಯಿಂದ ಸ್ಪರ್ಧಿಸಿದ್ದ ಎಂ.ಟಿ. ಕೃಷ್ಣಪ್ಪ ಕೂಡ ಸತತ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕೊರಟಗೆರೆಯಿಂದ ಸ್ಪರ್ಧಿಸಿದ್ದ ಹಾಲಿ ಜಿ.ಪಂ. ಸದಸ್ಯ ಸುಧಾಕರ್ಲಾಲ್ ಅವರು ಮುಖ್ಯಮಂತ್ರಿ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾದರು.
ಹ್ಯಾಟ್ರಿಕ್ ಗೆಲವು: ಇನ್ನು ಪಾವಗಡದಿಂದ ಸ್ಪರ್ಧಿಸಿದ್ದ ತಿಮ್ಮರಾಯಪ್ಪ ಅವರು ಕಾಂಗ್ರೆಸ್ನ ವೆಂಕಟೇಶ್ ಅವರನ್ನು ಪರಾಭವಗೊಳಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಗುಬ್ಬಿಯಿಂದ ಸ್ಪರ್ಧಿಸಿದ್ದ ಎಸ್.ಆರ್. ಶ್ರೀನಿವಾಸ್ಗೆ ಹ್ಯಾಟ್ರಿಕ್ ಗೆಲವು. ಕಳೆದ ಚುನಾವಣೆಯಲ್ಲಿ ತಮ್ಮನ ಸ್ಪರ್ಧೆಯಿಂದ ಪರಾಭವಗೊಂಡಿದ್ದ ನಾಗರಾಜಯ್ಯ ಅವರು ಈ ಬಾರಿ ತಮ್ಮನನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ ಜೆಡಿಎಸ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪಾರುಪತ್ಯ ಮೆರೆದಿದೆ. ಅಲ್ಲದೇ ಹಳೇ ಮೈಸೂರು ಪ್ರಾಂತ್ಯದಲ್ಲಿ ಯಾವತ್ತೂ ಜೆಡಿಎಸ್ ಶಕ್ತಿಶಾಲಿ ಎಂಬುದನ್ನು ಸಾಬೀತುಪಡಿಸಿದೆ.
- ಉಗಮ ಶ್ರೀನಿವಾಸ್