ನದಿ ಮೂಲದ ಶಾಶ್ವತ ಕುಡಿಯುವ ನೀರಿನ ಅನುಷ್ಠಾನ
ಪಾವಗಡ: ನದಿ ಮೂಲದ ಶಾಶ್ವತ ಕುಡಿಯುವ ನೀರಿನ ಅನುಷ್ಠಾನ ಹಾಗೂ ರೈತರ, ಬಡವರ ಪರ ಕ್ಷೇತ್ರದ ಅಭಿವೃದ್ಧಿಗೆ ಬದ್ಧರಾಗುವುದಾಗಿ ನೂತನ ಶಾಸಕ ಕೆ.ಎಂ.ತಿಮ್ಮರಾಯಪ್ಪ ಭರವಸೆ ನೀಡಿದರು. ಅವರು ಬುಧವಾರ ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನನ್ನ ಹಾಗೂ ಪಕ್ಷದ ಮೇಲೆ ನಂಬಿಕೆಯಿಟ್ಟು ಬಹುಮತ ಅಂತರದಲ್ಲಿ ಗೆಲ್ಲಿಸಿರುವುದಕ್ಕೆ ಕ್ಷೇತ್ರದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ತಾಲೂಕಿನ ಜ್ವಲಂತ ಸಮಸ್ಯೆಗಳು ಬಗ್ಗೆ ಮಾತನಾಡಿ ಪ್ಲೋರೈಡ್ಯುಕ್ತ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ನದಿ ಮೂಲದ ಕುಡಿಯುವ ನೀರಿನ ಅನುಷ್ಠಾನಕ್ಕೆ ನನ್ನ ಮೊದಲ ಅದ್ಯತೆ ಎಂದರು. ಎಲ್ಲಾ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು, ಉದ್ಯೋಗ ಸೃಷ್ಟಿ, ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ, ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಒತ್ತು ನೀಡುವ ಮೂಲಕ ರೈತರ ಅನುಕೂಲಕ್ಕೆ ಪ್ರಗತಿಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬದ್ಧರಾಗುವ ಭರವಸೆ ನೀಡಿದರು.