ಮತ ಎಣಿಕೆ: ಕಾರ್ಯಕರ್ತರ ಕೇಕೆ, ಅಭ್ಯರ್ಥಿಗಳ ಢವ ಢವ
ಕನ್ನಡಪ್ರಭ ವಾರ್ತೆ ಬೆಂಗಳೂರು ಮೆ 8
ಹೊರಗೆ ಕಾರ್ಯಕರ್ತರ ಜೈಕಾರ, ಕೇಕೆಯ ಸದ್ದು. ಒಳಗೆ ಅಭ್ಯರ್ಥಿಯ ಮನದಲ್ಲಿ ಢವಢವ. ಪ್ರತಿ ಸುತ್ತಿನ ಎಣಿಕೆಯ ಅಂಕಿ ಅಂಶ ಬರುತ್ತಿದ್ದಂತೆ ಏರಿಳಿತವಾಗುತ್ತಿದ್ದ ಮನದ ದುಗುಡ.
ಇದು ಮಹಾರಾಣಿ ಕಾಲೇಜಿನ ಮತಕೇಂದ್ರದಲ್ಲಿ ಬುಧವಾರ ಕಂಡು ಬಂದ ದೃಷ್ಯ. ಏಳು ವಿಧಾಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದ್ದ ಮಹಾರಾಣಿ ಕಾಲೇಜಿನ ಎದುರು ಸ್ವಾತಂತ್ರ್ಯ ಉದ್ಯಾನದಲ್ಲಿ ಸಾವಿರಾರು ಕಾರ್ಯಕರ್ತರು ಸೇರಿದ್ದರು.
ಮಧ್ಯಾಹ್ನದ ಹೊತ್ತಿಗೆ ಒಂದೊಂದೇ ಕ್ಷೇತ್ರಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಫಲಿತಾಂಶ ಪಡೆದು ಅಭ್ಯರ್ಥಿಗಳು ಹೊರ ಬರುತ್ತಿದ್ದಂತೆ ಸುತ್ತುವರೆದ ಕಾರ್ಯಕರ್ತರು, ಬೆಂಬಲಿಗರು ಅವರನ್ನು ಹೊತ್ತು ಶೇಷಾದ್ರಿ ರಸ್ತೆಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ತಮ್ಮ ನಾಯಕರ ಗೆಲುವು ಖಚಿತಗೊಳ್ಳುತ್ತಿದ್ದಂತೆ ಹೂವಿನ ಗುಚ್ಛಗಳು, ಹಾರಗಳನ್ನು ಗೆದ್ದ ಅಭ್ಯರ್ಥಿಗಳಿಗೆ ನೀಡಿ ಖುಷಿ ಪಡುತ್ತಿದ್ದರು. ವಿಜಯೋತ್ಸಾವದ ವೇಳೆ ಗಲಾಟೆ ಆಗಬಹುದು ಎನ್ನುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೆ ಗೆಲುವಿನ ಉತ್ಸಾಹ ತಡೆಯದ ಕಾರ್ಯಕರ್ತರು ಪಕ್ಷಗಳ ಬಾವುಟ ಹಾರಿಸಿ ಸಂಭ್ರಮ ಪಟ್ಟರು.
ಜಪ ಮಾಡಿದ್ರು: ಮತ ಎಣಿಕೆ ಆರಂಭಕ್ಕೂ ಮುನ್ನವೇ ಜಪಮಣಿಯನ್ನು ಕೈಯಲ್ಲಿಡಿದುಕೊಂಡು ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿ ನೆ.ಲ. ನರೇಂದ್ರಬಾಬು ಮತ ಎಣಿಕೆ ಮುಕ್ತಾಯವಾಗುವವರೆಗೂ ಮಣಿಜಪದಲ್ಲಿ ತೊಡಗಿದ್ದರು. ಮುದ್ದಾಡಿದರು: ಸರ್ವಜ್ಞ ನಗರ ಕಾಂಗ್ರೆಸ್ ಅಭ್ಯರ್ಥಿ ಟಿ.ಜೆ.ಎಸ್. ಜಾರ್ಜ್ ಗೆದ್ದು ಹೊರಬರುತ್ತಿದ್ದಂತೆ ಖುಷಿ ಹೆಚ್ಚಾದ ಬೆಂಬಲಿಗನೊಬ್ಬ ಒಡಿ ಹೋಗಿ ಜಾರ್ಜ್ ಅವರನ್ನು ತಬ್ಬಿ ಕೆನ್ನೆಗೆ ಮುತ್ತು ಕೊಟ್ಟ. ಮತ್ತೆ ಕೆಲವರಂತೆ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಲು ಆರಂಭಿಸಿದರು. ಇದರಿಂದ ಶೇಷಾದ್ರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು.
ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ರಸ್ತೆಯಿಂದ ಪಕ್ಕಕ್ಕೆ ಸರಿಸಿದರು.