ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶಿರಾದಲ್ಲಿ ಮರಳಿ ಚಂದ್ರ'ಜಯ'

Rashmi Kasaragodu
Updated On : 8 May 2013, 11:51 am

ಶಿರಾ: ಶಿರಾ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ನ ಟಿ.ಬಿ.ಜಯಚಂದ್ರ ಅವರು ಮರು ಆಯ್ಕೆಯಾಗಿದ್ದಾರೆ. ಕ್ಷೇತ್ರದ ಇತಿಹಾಸದಲ್ಲಿ ಮರು ಆಯ್ಕೆಗೊಂಡ ಶಾಸಕರಲ್ಲಿ ಇವರೊಬ್ಬರೆ. ಶಿರಾ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಸರಣಿಯಾಗಿ ಗೆಲ್ಲುವುದಿಲ್ಲ ಎಂಬ ನಾಣ್ಣುಡಿಯನ್ನು ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಅವರು ಮತ್ತೊಮ್ಮೆ ಆಯ್ಕೆಯಾಗುವ ಮೂಲಕ ಸುಳ್ಳು ಮಾಡಿದ್ದಾರೆ.
ಬರಡು ಪ್ರದೇಶ ಶಿರಾ ಕ್ಷೇತ್ರದ ಭಗೀರಥರೆಂದೇ ಹೆಸರು ಪಡೆದಿರುವ ಶಾಸಕ ಟಿ.ಬಿ. ಜಯಚಂದ್ರ ಅವರು 73,734 ಮತಗಳನ್ನು ಪಡೆದು ಮರು ಆಯ್ಕೆಯಾಗಿದ್ದಾರೆ. ಈ ಹಿಂದೆ ರಾಜ್ಯದ ಕೃಷಿ ಸಚಿವರಾಗಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ, ಮಂಡ್ಯ ಕ್ಷೇತ್ರದ ಉಸ್ತುವಾರಿ ಸಚಿವರಾಗಿ, ದೆಹಲಿ ಪ್ರತಿನಿಧಿಯಾಗಿ, ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿ, ಲೆಕ್ಕ ಪರಿಶೋಧಕ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅನುಯಾಯಿಯಾಗಿರುವ, ಶಾಸಕ ಟಿ.ಬಿ.ಜಯಚಂದ್ರ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದೆ ಶಿರಾ ಕ್ಷೇತ್ರದ ಜನಕ್ಕೆ ಬಿಂಬಿತರಾಗಿದ್ದಾರೆ. ಈ ಬಾರಿ ಇವರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಇಲ್ಲವೇ ಸರ್ಕಾರದಲ್ಲಿ ಪ್ರಭಾವಿ ವ್ಯಕ್ತಿಯಾಗಲಿದ್ದಾರೆ ಎಂದು ಶಿರಾ ಕ್ಷೇತ್ರದ ಜನತೆ ಆಶಾ ಭಾವನೆ ಹೊಂದಿದ್ದಾರೆ.
ವಿಜಯೋತ್ಸವ: ಶಾಸಕ ಟಿ.ಬಿ.ಜಯಚಂದ್ರ ಅವರ ಜಯದ ವಿಷಯ ತಿಳಿದ ತಕ್ಷಣ ಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿನ ಐ.ಬಿ.ಸರ್ಕಲ್, ಭಗವಾನ್ ಸರ್ಕಲ್, ನಾರಾಯಣಸ್ವಾಮಿ ಕಲ್ಯಾಣ ಮಂಟಪ, ಖಾಸಗಿ ಬಸ್ ನಿಲ್ದಾಣ ರಸ್ತೆ, ಮಲ್ಲಿಕ್ ರೆಹಾನ್ ಗರ್ಗಾ ಸರ್ಕಲ್, ಮಧುಗಿರಿ ಸರ್ಕಲ್, ಸಂತೆಪೇಟೆ, ಜ್ಯೋತಿನಗರ ಸೇರಿದಂತೆ ಹಲವು ಕಡೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಳ ಮದ್ದಳೆಗಳಿಂದ ವಿಜಯೋತ್ಸವ ಯಾತ್ರೆ ನಡೆಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement