ಸ್ವಚ್ಛ, ಸ್ಥಿರ ಸರ್ಕಾರ ಗುರಿ: ಸಿದ್ದರಾಮಯ್ಯ
ಕ.ಪ್ರ. ವಾರ್ತೆ ಮೈಸೂರು ಮೇ 8
ನಿರೀಕ್ಷೆಯಂತೆ ಜನ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಆಶೀರ್ವದಿಸಿದ್ದಾರೆ. ಸ್ವಚ್ಛ ಹಾಗೂ ಸ್ಥಿರ ಸರ್ಕಾರ ನೀಡುವುದೇ ನಮ್ಮ ಗುರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ವರುಣ ಕ್ಷೇತ್ರದಿಂದ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮುಖ್ಯಮಂತ್ರಿ ಅಭ್ಯರ್ಥಿಯಾದ ನೀವು ದೆಹಲಿಗೆ ಯಾವಾಗ ಹೋಗುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ, ಅಗತ್ಯ ಬಿದ್ದರೆ ದೆಹಲಿಗೆ ಹೋಗುವುದಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಜನರ ಗಾಳಿ ಎದ್ದಿತ್ತು. ಇದರಿಂದಾಗಿಯೇ ಬಿಜೆಪಿ ರಾಜ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ ಎಂದ ಅವರು, ಎಚ್.ಡಿ. ಕೋಟೆ ಬಗ್ಗೆ ನಮಗೆ ಅನುಮಾನವಿತ್ತು. ಚಾಮುಂಡೇಶ್ವರಿ ಗೆಲ್ಲಬೇಕಿತ್ತು. ಕೆ.ಆರ್. ನಗದಲ್ಲಿ ಹೋರಾಟ ನೀಡಿರುವುದಾಗಿ ವಿಶ್ಲೇಷಿಸಿದರು.
ಜನರು ಹಣ ನೋಡಿ ಮತ ಹಾಕುವುದಿಲ್ಲ. ಪಕ್ಷ, ವ್ಯಕ್ತಿ ನೋಡಿ ಮತ ಹಾಕುತ್ತಾರೆ ಎಂದು ನಾನು ಹೇಳಿದ್ದೆ. ವರುಣ ಕ್ಷೇತ್ರದಲ್ಲಿ ನಾನು ಹೇಳಿದ್ದೇ ಆಗಿದೆ ಎಂದು ಪರೋಕ್ಷವಾಗಿ ಕೆಜೆಪಿ ಅಭ್ಯರ್ಥಿ ಕಾ.ಪು. ಸಿದ್ದಲಿಂಗಸ್ವಾಮಿ ವಿರುದ್ಧ ಕಿಡಿಕಾರಿದರು. ಇದೇ ನಿಮ್ಮ ಕೊನೆಯ ಚುನಾವಣೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಹೌದು ಎಂದರು.