ಹೈಕಮಾಂಡ್ ಕೊಟ್ಟ ಹೊಣೆ ಹೊರಲು ಸಿದ್ಧ: ಶಾಮನೂರು
ಕ.ಪ್ರ.ವಾರ್ತೆ ದಾವಣಗೆರೆ ಮೇ.8
ಪಕ್ಷದ ಹೈಕಮಾಂಡ್ ನೀಡುವ ಯಾವುದೇ ಹೊಣೆ ಹೊರಲು ನಾನು ಸಿದ್ಧ ಎಂದು ಕೆಪಿಸಿಸಿ ಖಜಾಂಚಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ದಾಖಲೆ ಅಂತರದಲ್ಲಿ ಜಯ ಸಾಧಿಸಿದ್ದ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಯುಬಿಡಿಟಿ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ತಾವು ಜಯ ಗಳಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ತಮ್ಮ ಸಂತಸ ಹಂಚಿಕೊಂಡ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಜಾಫರ್ ಷರೀಫ್, ಸಿದ್ದರಾಮಯ್ಯ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಸ್ವಂತ ಬಲದಿಂದ ಇಂದು ಅಧಿಕಾರಕ್ಕೆ ಹಿಡಿಯುತ್ತಿರುವ ಕಾಂಗ್ರೆಸ್ಗೆ ಸೂಕ್ತ ಸಿಎಂ ಯಾರೆಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಹಲವಾರು ದಶಕಗಳಿಂದ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತನಾಗಿ, ನಾಯಕನಾಗಿರುವ ನಾನು ಯಾವುದೇ ಸ್ಥಾನವನ್ನೂ ಕೇಳುವುದಿಲ್ಲ. ಆದರೆ, ಹೈಕಮಾಂಡ್ ಯಾವುದೇ ಜವಾಬ್ದಾರಿ, ಹೊಣೆಗಾರಿಕೆ ವಹಿಸಿದರೂ ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದರು.