ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಏಕೆ ಹೀಗಾಯ್ತೋ ನಾಕಾಣೆ...

Rashmi Kasaragodu
Updated On : 9 May 2013, 11:57 am

ಕ.ಪ್ರ. ವಾರ್ತೆ   ತುರುವೇಕೆರೆ,ಮೇ 9
ಏಕೆ ಹೀಗಾಯ್ತೋ ನಾಕಾಣೆ. ತಮ್ಮ ಗೆಲವು ಶತಸ್ಸಿದ್ಧ ಎಂಬುದು ಖಾತರಿಯಾಗಿತ್ತು. ಆದರೂ ಈ ರೀತಿಯ ಫಲಿತಾಂಶ ಬಂದಿರುವುದು ತಮಗೆ ಆಶ್ಚರ್ಯ ತರಿಸಿದೆ ಎಂದು ಈ ವಿಧಾನಸಭಾ ಕ್ಷೇತ್ರದ ಪರಾಜಿತ ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಹೇಳಿದರು.
 ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೆಜೆಪಿ ಕಾರ್ಯಕರ್ತರು ನಿಷ್ಠಾವಂತರಾಗಿ ಪಕ್ಷಕ್ಕಾಗಿ ದುಡಿದರು. ಎಲ್ಲೆಲ್ಲೂ ಸಹ ಕೆಜೆಪಿ ಪರವಾದ ದನಿಯೇ ಇತ್ತು. ಕೊನೇ ಕ್ಷಣದಲ್ಲಿ ಏನಾಯಿತೋ ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾ ಮಸಾಲಾ ಜಯರಾಂ ತೀವ್ರ ಗದ್ಗದಿತರಾದರು. ಕಣ್ಣಂಚಿನಿಂದ ಬರುತ್ತಿದ್ದ ನೀರನ್ನು ಪದೇ ಪದೇ ಒರೆಸಿಕೊಳ್ಳುತ್ತಿದ್ದ ಅವರು ತಮಗೆ ಈ ಫಲಿತಾಂಶದಿಂದ ಕ್ಷಣಕಾಲ ಬೇಸರವಾಯಿತು ನಿಜ. ಆದರೆ ತಾವು ಹಾಗೂ ತಮ್ಮ ಪಕ್ಷ ಕೇವಲ ಮೂರ್ನಾಲ್ಕು ತಿಂಗಳ ಕೂಸು. ಸಿಕ್ಕ ಕೆಲ ಸಮಯದಲ್ಲೇ ಕ್ಷೇತ್ರದಾದ್ಯಂತ ಸುತ್ತಾಡಿ ಸುಮಾರು 58 ಸಾವಿರದಷ್ಟು ಮತಗಳಿಸುವುದು ಸಹ ಸುಲಭದ ಮಾತಲ್ಲ. ಕ್ಷೇತ್ರದ ಮತದಾರರು ತಮ್ಮನ್ನು ಹರಸಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಸಂಘಟನೆ ಮಾಡಿ, ವಿರೋಧ ಪಕ್ಷವಾಗಿ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಮಸಾಲಾ ಜಯರಾಂ ಹೇಳಿದರು.
ದೃತಿಗೆಡುವ ಅಗತ್ಯವಿಲ್ಲ: ಈ ಫಲಿತಾಂಶದಿಂದ ಯಾವುದೇ ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲ. ತಮಗೆ ನಿಜವಾದ ನೈತಿಕ ಗೆಲವು ಲಭಿಸಿದೆ. ತಾವು ಮುಂಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸ ಕಾರ್ಯಗಳ ಪಟ್ಟಿ ಮಾಡಿ ಕಾರ್ಯಗತಗೊಳಿಸಲು ಹೋರಾಡುವುದಾಗಿ ಹೇಳಿದರು. ತಮ್ಮ ಸೋಲಿಗೆ ಯಾರನ್ನೂ ದೂಷಿಸದ ಮಸಾಲಾ ಜಯರಾಂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಕನಿಷ್ಠ ಮತಗಳನ್ನು ಗಳಿಸಲೂ ಆಗದಿದ್ದದು ತಮ್ಮ ಸೋಲಿಗೆ ಕಾರಣ ಎಂದರು.   ತಾವು ಇದೇ ಕ್ಷೇತ್ರದಲ್ಲಿ ಇದ್ದು ಪಕ್ಷ ಹಾಗೂ ಕಾರ್ಯಕರ್ತರನ್ನು ಸಂಘಟನೆ ಮಾಡೇ ತೀರುವುದಾಗಿ ಹೇಳಿದ ಮಸಾಲಾ ಜಯರಾಂ ತಮಗೆ ಸಹಕರಿಸಿದ ಕ್ಷೇತ್ರದ ಎಲ್ಲಾ ಮತದಾರರು ಪಕ್ಷದ ಕಾರ್ಯಕರ್ತರಿಗೆ  ಕೃತಜ್ಞತೆ ಸಲ್ಲಿಸಿದರು.
 ತಾಲೂಕು ಅಧ್ಯಕ್ಷ ಮಾಚೇನಹಳ್ಳಿ ರಾಮಣ್ಣ, ಮುಖಂಡ ಎಂ.ಡಿ.ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಎಂ.ಕೆ. ಕೆಂಪೇಗೌಡ, ಹೇಮಚಂದ್ರು, ಜಿಲ್ಲಾ ರೈತ ಘಟಕ ಅಧ್ಯಕ್ಷ ದೊಂಬರನಹಳ್ಳಿ ಬಸವರಾಜು ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement