ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಂಗ್ರೆಸ್‌ನ 20 ವರ್ಷಗಳ ವನವಾಸ ಅಂತ್ಯ

Rashmi Kasaragodu
Updated On : 9 May 2013, 11:55 am

ಅದಲಗೆರೆ ನಾಗೇಂದ್ರಕುಮಾರ್
ತುಮಕೂರು: 20 ವರ್ಷಗಳ ದೀರ್ಘ ವನವಾಸದ ನಂತರ ತುಮಕೂರು ನಗರದಲ್ಲಿ ಕಾಂಗ್ರೆಸ್‌ಗೆ ಮತ್ತೆ ಶಾಸಕಗಿರಿ ಲಭಿಸಿದೆ. ಯುವ ಮುಖಂಡ, ಎಂಜಿನಿಯರಿಂಗ್ ಪದವೀಧರ ಡಾ. ರಫೀಕ್ ಅಹಮದ್ ತುಮಕೂರು ನಗರದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
1994 ರಿಂದ 2013 ಮೇ ಮೊದಲ ವಾರದವರೆಗೆ ಬಿಜೆಪಿಯ ಸೊಗಡು ಶಿವಣ್ಣ ಸತತವಾಗಿ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಅವರು ಈ ಬಾರಿಯ ಚುನಾವಣೆಯಲ್ಲಿ ಸೋಲನ್ನಪ್ಪಿದ್ದು, ರಫೀಕ್ ಅಹಮದ್ ಅವರಿಗೆ ಈಗ ಶಾಸಕಗಿರಿ ಲಭಿಸಿದೆ.
1994 ರಲ್ಲಿ ಡಾ. ರಫೀಕ್ ಅಹಮದ್ ಅವರ ಮಾವ ಹಾಗೂ ಹಾಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಸೋಲಿನ ನಂತರ ಮತ್ತೆ ಕಾಂಗ್ರೆಸ್‌ಗೆ ತುಮಕೂರು ನಗರದಲ್ಲಿ ಶಾಸಕ ಸ್ಥಾನ ದಕ್ಕಿರಲಿಲ್ಲ. ಮೂರು ಬಾರಿ ಅಂದರೆ 1994 ರಿಂದ 2004 ರವರೆಗೆ ಮಾವ ಷಫಿ ಅಹಮದ್ ಹಾಗೂ ಒಂದು ಬಾರಿ ಅಂದರೆ 2008 ರಲ್ಲಿ ಅಳಿಯ ರಫೀಕ್ ಅಹಮದ್ ಬಿಜೆಪಿಯ ಸೊಗಡು ಶಿವಣ್ಣನವರ ಎದುರು ಪರಾಭವಗೊಂಡಿದ್ದರು.
ಮಾವನ ನೆರಳಲ್ಲೇ: ಅಧಿಕೃತವಾಗಿ ಡಾ. ರಫೀಕ್ ಅಹಮದ್ ರಾಜಕೀಯ ಪ್ರವೇಶಿಸಿದ್ದು 2008 ರಲ್ಲಿ. 2008 ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೊಗಡು ಶಿವಣ್ಣನವರ ಎದುರು ಪರಾಭವಗೊಂಡಿದ್ದ ಡಾ. ರಫೀಕ್ ಅಹಮದ್ ಮತ್ತೆ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಅಥವಾ ಜಿಲ್ಲೆಯ ಅಥವಾ ನಗರದ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ಸಮಾಜ ಸೇವೆಯ ಮೂಲಕ ರಫೀಕ್ ಅಹಮದ್ ಅವರು ಚಾಲ್ತಿಯಲ್ಲಿದ್ದರು. ಮಾವ ಎಸ್. ಷಫಿ ಅಹಮದ್ ಅವರ ನೆರಳಿನಲ್ಲೇ ರಾಜಕೀಯ ಮಾಡಿಕೊಂಡು ಬಂದ ಅಳಿಯ ಡಾ. ರಫೀಕ್ ಅಹಮದ್,  ಈ ಬಾರಿ ತುಮಕೂರು ನಗರದ ಶಾಸಕರಾಗಿ ಆಯ್ಕೆಯಾಗಿದ್ದು, ತಮ್ಮ ನಿಲುವು, ಧೋರಣೆಗಳನ್ನು ಪ್ರಕಟಿಸಲೇಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.
  ಮಾವ ಎಸ್. ಷಫಿ ಅಹಮದ್ ಅವರನ್ನು ಬಿಟ್ಟು ಒಂದೇ ಒಂದು ಸುದ್ದಿಗೋಷ್ಠಿ ನಡೆಸದ ರಫೀಕ್ ಅಹಮದ್ ಅವರ ರಾಜಕೀಯ ಜೀವನ ಕುತೂಹಲ ಮೂಡಿಸಿದೆ.
 ಅವರ ಮಾವ ಷಫಿ ಅವರ ರಾಜಕೀಯ ನೆರಳಿನ ಜೀವನ ಈ ಬಾರಿ ಅಂತ್ಯವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬಾರಿಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಿದು, ತುಮಕೂರಿನಲ್ಲಿ ಪ್ರಚಾರ ಮಾಡಿ ಹೋಗಿದ್ದರು. ಮುಸ್ಲಿಂ ಮತಗಳು ಗಣನೀಯ ಪ್ರಮಾಣದಲ್ಲಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಸತತವಾಗಿ 4 ಬಾರಿ ಕಾಂಗ್ರೆಸ್‌ಗೆ ಕೈಕೊಟ್ಟಿತ್ತು. ಆದರೆ  ಈ ಬಾರಿ  ಕೈ ಹಿಡಿದಿದ್ದು, ರಫೀಕ್ ಅಹಮದ್ ಅವರನ್ನು ಚುನಾಯಿಸಿದೆ.
 ವಿರೋಧ ಪಕ್ಷವಾಗಿ ಜಿಲ್ಲೆಯಲ್ಲಿ ಹಾಗೂ ನಗರದಲ್ಲಿ ಕಾಂಗ್ರೆಸ್ ವರ್ತಿಸಿದ ರೀತಿ ಹಲವು ಟೀಕೆ - ಟಿಪ್ಪಣಿಗಳಿಗೆ ಈಡಾಗಿತ್ತು. ಮಾವ ಷಫಿ ಅಹಮದ್ ಸತತವಾಗಿ ಎರಡನೇ ಬಾರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವಾದಗಳಿಂದ ದೂರ: ವಿವಾದಗಳಿಂದ ಬಹು ದೂರವೇ ಉಳಿದಿರುವ ರಫೀಕ್ ಅಹಮದ್, ರಾಜಕೀಯಕ್ಕಿಂತ ಹೆಚ್ಚಾಗಿ ಸಮಾಜ ಸೇವೆಯಲ್ಲೇ ತೊಡಗಿಸಿಕೊಂಡಿದ್ದರು. ಸೌಮ್ಯ ಸ್ವಭಾವದ, ಬಹುತೇಕ ಅವಧಿಯನ್ನು ಮಾವ ಷಫಿ ಅಹಮದ್ ಅವರ ಹೆಚ್‌ಎಂಎಸ್ ಶಿಕ್ಷಣ ಸಂಸ್ಥೆಯ ಶ್ರೇಯೋಭಿವೃದ್ದಿಗಾಗೇ ಮೀಸಲಿಟ್ಟಿದ್ದ ರಫೀಕ್ ಅಹಮದ್ ಈಗ ತುಮಕೂರು ನಗರದ ಜನಪ್ರತಿನಿಧಿಯಾಗಿದ್ದು, ಸ್ವತಂತ್ರ ನಿಲುವುಗಳನ್ನು ಪ್ರಕಟಿಸಬೇಕಾದ ಅನಿವಾರ್ಯತೆ ಬಂದೊದಗಿದೆ.


ಸೊಗಡು ಗತ್ತು, ಗೈರತ್ತು
ಮಾಜಿ ಸಚಿವ ಸೊಗಡು ಶಿವಣ್ಣನವರು ಸರ್ಕಾರಿ ನೌಕರರನ್ನು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ರೀತಿ ಹಾಗೂ ಅಧಿಕಾರದ ಗತ್ತನ್ನು ಕಂಡಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರ, ಮಾವನ ನೆರಳಿನಲ್ಲೇ ಇರುವ ರಫೀಕ್ ಅಹಮದ್ ಅವರ ಗುಣ-ಲಕ್ಷಣಗಳನ್ನು ಕಾಣುವ ಸಂದರ್ಭ ಬಂದೊದಗಿದೆ. ರಫೀಕ್ ಯಾವ ರೀತಿ ಶಾಸಕಗಿರಿ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement