ಗೆಲವಿನ ನಗೆ ಬೀರಿದ ಸುರೇಶ್ ಬಾಬು
ಚಿಕ್ಕನಾಯಕನಹಳ್ಳಿ: ಹಲವು ವಿಶೇಷಣಗಳಿಗೆ ಹೆಸರಾದ ಚಿ.ನಾ.ಹಳ್ಳಿ ಕ್ಷೇತ್ರ ಈ ಬಾರಿಯೂ ಸಹ ವಿಶೇಷವಾದ ಫಲಿತಾಂಶ ನೀಡಿದ್ದು, ಜೆಡಿಎಸ್ನ ಸಿ.ಬಿ. ಸುರೇಶ್ಬಾಬು ಗೆಲ್ಲುವುದರೊಂದಿಗೆ ದಾಖಲೆ ನಿರ್ಮಿಸಿದ್ದಾರೆ.
ರಾಜ್ಯದಲ್ಲಿ ಆಡಳಿತಕ್ಕೆ ಬರುವ ಪಕ್ಷಕ್ಕೆ ವಿರುದ್ಧವಾದ ಅಭ್ಯರ್ಥಿ ಗೆಲ್ಲುತ್ತಾರೆಂಬ ಅಪವಾದವನ್ನು ನಿಜವಾಗಿಸಿದ್ದು, ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲವೆಂಬ ಮಾತನ್ನು ಸುಳ್ಳಾಗಿಸಿದೆ. ಕಳೆದ 30 ವರ್ಷಗಳ ಹಿಂದೆ ಹಾಲಿ ಶಾಸಕ ಸಿ.ಬಿ.ಸುರೇಶ್ಬಾಬು ಅವರ ತಂದೆ ದಿ. ಎನ್.ಬಸವಯ್ಯನವರು ಮೊದಲ ಬಾರಿ ಸಂಸ್ಥಾಕಾಂಗ್ರೆಸ್ಸಿನಿಂದ ಶಾಸಕರಾಗಿ ಆಯ್ಕೆಯಾಗಿ, ನಂತರ ಆಡಳಿತ ಕಾಂಗ್ರೆಸ್ ಸೇರುವುದರೊಂದಿಗೆ ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ನಂತರ ಅವರು ಸ್ಪರ್ಧಿಸಿದ ಮೂರು ಚುನಾವಣೆಗಳಲ್ಲಿ ಸೋಲನ್ನನುಭವಿಸಿದರು. ಆಮೇಲೆ ಬಂಗಾರಪ್ಪನವರ ಕೆಸಿಪಿಯಿಂದ ಸ್ಪರ್ಧಿಸಿ ಗೆದ್ದರು. ಅವರು ತೆರವು ಮಾಡಿದ ಸ್ಥಾನವನ್ನು ತುಂಬಲು ಕಿರಿಯಪುತ್ರ ಸಿ.ಬಿ.ಸುರೇಶ್ಬಾಬು ಮಧ್ಯಂತರ ಚುನಾವಣೆಯಲ್ಲಿ ಸ್ಫರ್ರ್ಧಿಸಿ ಸೋತು, ನಂತರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು. ಇದು ಸಿ.ಬಿ.ಸುರೇಶ್ ಬಾಬು ಅವರ ಮೂರನೇ ಗೆಲವಾಗಿದ್ದು 60759 ಮತಗಳಿಂದ ಗೆಲವು ಸಾಧಿಸಿದ್ದಾರೆ. ನಂತರದ ಸ್ಥಾನದಲ್ಲಿರುವ ಜೆ.ಸಿ.ಮಾಧುಸ್ವಾಮಿ 49600 ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ.