ದಲಿತರ ನಿರ್ಲಕ್ಷ್ಯದಿಂದ ಪರಮೇಶ್ವರ್ ಸೋತ್ರು: ಚೇ.ವೆಂಕಟೇಶ್
ತುಮಕೂರು: ದಲಿತ ಚಳವಳಿ, ರೈತ ಚಳವಳಿ, ಭಾಷಾ ಚಳವಳಿ, ಮಹಿಳಾ ಚಳವಳಿಗಳು ಸೇರಿದಂತೆ ಇನ್ಯಾವುದೇ ಚಳವಳಿಗಳ ಅನುಭವದ ಕೊರತೆ ಹಾಗೂ ಜಿಲ್ಲೆಯ ದಲಿತ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದೇ ಜಿ. ಪರಮೇಶ್ವರ್ ಸೋಲಿಗೆ ಕಾರಣ ಎಂದು ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ತಿಳಿಸಿದ್ದಾರೆ. ಇನ್ನು ಮುಂದಾದರು ಪರಮೇಶ್ವರ್ ಅವರು ಚಳವಳಿ ಮುಖಂಡರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿ ಎಂದು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ಪರಿಶಿಷ್ಟ ಜಾತಿಗಳ ಹೊಲೆಯ-ಮಾದಿಗ ಪ್ರತಿನಿಧಿಯಾಗಿ 2008ರ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದ ಪರಮೇಶ್ವರ್ ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಜಿಲ್ಲೆಯ 2 ಮೀಸಲು ಕ್ಷೇತ್ರಗಳಿದ್ದರೂ ಒಂದಕ್ಕಾದರೂ ಬಹುಸಂಖ್ಯಾತರಾದ ಮಾದಿಗರಿಗೆ ಟಿಕೆಟ್ ಕೊಡಿಸದೇ ವಂಚಿಸಿದ್ದಾರೆ ಎಂದಿದ್ದಾರೆ. ಜಿಲ್ಲೆಯಾದ್ಯಂತ ಅನೇಕ ಹೊಲೆಯ-ಮಾದಿಗರ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಸೌಜನ್ಯಕ್ಕಾದರೂ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿಲ್ಲ ಎಂದು ಆರೋಪಿಸಿದ್ದಾರೆ. ಇಂತಹ ನಡವಳಿಕೆಗಳು ಜಿ.ಪರಮೇಶ್ವರ್ ಸೋಲಿಗೆ ಕಾರಣವಾಗಿದ್ದು ಇನ್ನು ಮುಂದಾದರು ದಲಿತರನ್ನು ತೆಕ್ಕೆಗೆ ತೆಗೆದುಕೊಂಡು ದಲಿತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಗಮನ ಹರಿಸಬೇಕು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿರುವ ದಲಿತ ರಾಜಕಾರಣಿ ಜಿ.ಪರಮೇಶ್ವರ್ ಮತ್ತು ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನಗಳಲ್ಲಿ ಸಮಾನ ಅವಕಾಶ ನೀಡುವುದೇ ನ್ಯಾಯ. ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯ ಒದಗಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.