ದೇವತಾ ಬಿಂಬ ಪ್ರತಿಷ್ಠಾಪನೆ
ಚಿಕ್ಕನಾಯಕನಹಳ್ಳಿ: ಪಟ್ಟಣದ ಶ್ರೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೂತನವಾಗಿ ದೇವತಾ ಬಿಂಗಳ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಮೇ 11 ರಿಂದ 13ವರಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಶ್ರೀಮಹಾಗಣಪತಿ, ಶ್ರೀನವಗ್ರಹ, ಶ್ರೀಪದ್ಮಾವತೀ ದೇವತೆಗಳ ನೂತನ ಬಿಂಬಗಳ ಪ್ರತಿಷ್ಠಾಪನಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. 11ರಂದು ಬೆಳಿಗ್ಗೆ 8.30ರಿಂದ ಮಹಾಗಣಪತಿ ಪೂಜೆ, ಮಂಗಳ ದ್ರವ್ಯ ಸಮೇತ ಯಾಗಶಾಲಾ ಪ್ರವೇಶದೊಂದಿಗೆ ಪ್ರಾರಂಭವಾಗಿ ಸಂಜೆ 6 ಗಂಟೆಗೆ ದಿಕ್ಪಾಲ ದೇವತಾ ಬಲಿ, ಮಹಾ ಮಂಗಳಾರತಿಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯ. ದಿ.12ರಂದು ಬೆಳಿಗ್ಗೆ 8ರಿಂದ ಗಂಗಾ-ಯಮುನಾ ಪೂಜೆ, ಮಹಾಗಣಪತಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ, ಸಂಜೆ 6 ರಿಂದ ಮಂಡಲ ದರ್ಶನ, ಸ್ನಪನ ಮಂಡಲ ಪೂಜೆ, ಸ್ಥಾನ ಶುದ್ಧಿ ಬಿಂಬ ಹೋಮ, ಸಪ್ತಾಧಿವಾಸ ಪೂಜೆ ಮಂಗಳಾರತಿ, 13ರಂದು ಬೆಳಿಗ್ಗೆ ಉಷಃ ಕಾಲದಲ್ಲಿ 4.30ರಿಂದ 6.30ಕ್ಕೆ ಸಲ್ಲುವ ಬ್ರಾಹ್ಮೀ ಮಹೂರ್ತದಲ್ಲಿ ಮಹಾಗಣಪತಿ, ಆದಿತ್ಯಾದಿ ನವಗ್ರಹ ಮತ್ತು ಪದ್ಮಾವತಿ ಅಮ್ಮನವರಿಗೆ ರತ್ನನ್ಯಾಸ ಪ್ರತಿಷ್ಠಾಪನೆ, ನೇತ್ರೋನ್ಮಿಲನ ಪ್ರಾಣಪ್ರತಿಷ್ಠಾಪನೆ,ದೇವತಾ ಆವಾಹನಾ, ಮಹಾಗಣಪತಿ, ಲಕ್ಷ್ಮೀ, ಪದ್ಮಾವತಿ ವೆಂಕಟರಮಣ ಸ್ವಾಮೀ, ಶ್ರೀ ಆಂಜನೇಯ, ಆದಿತ್ಯಾದಿ ನವಗ್ರಹ ದೇವತೆಗಳಿಗೆ ನಿರೀಕ್ಷಣೆ, ಪ್ರತಿಷ್ಠಾಹೋಮ, ಮಹಾಗಣಪತಿ ಹೋಮ, ನಂತರ ಪ್ರಧಾನ ಬಲಿ, ತೀರ್ಥಪ್ರಸಾದ ವಿನಿಯೋಗದನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಭಗೀರಥ ಭವನಉದ್ಘಾಟನೆ
ತಿಪಟೂರು: ನಗರದ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ನೂತನ ಭಗೀರಥ ಭವನದ ಉದ್ಘಾಟನೆ ಸಮಾರಂಭವು ಮೇ 13ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಮೌಂಟ್ ಅಬು ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ. ಮೃತ್ಯಂಜಯಣ್ಣ ನೆರವೇರಿಸಲಿದ್ದು, ಆಶೀರ್ವಚನವನ್ನು ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿ ನೀಡಲಿದ್ದಾರೆ. ಅಧ್ಯಕ್ಷತೆ ಶಾಸಕ ಕೆ.ಷಡಕ್ಷರಿ ವಹಿಸಲಿದ್ದು, ಕೆಜೆಪಿ ಮುಖಂಡ ಲೋಕೇಶ್ವರ, ಮಾಜಿ ಶಾಸಕ ಬಿ.ಸಿ. ನಾಗೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಶ್ರೀನಿವಾಸ್ ಹ್ಯಾಟ್ರಿಕ್
ಗುಬ್ಬಿ: ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಾಸಕ ಎಸ್.ಆರ್. ಶ್ರೀನಿವಾಸ್ ಮೂರನೇ ಬಾರಿಗೆ ಶಾಸಕರಾಗಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ಮತ ಎಣಿಕೆ ಕೇಂದ್ರದಿಂದ ಗುಬ್ಬಿ ತಾಲೂಕಿನ ಮಾದಪುರದ ಶ್ರೀಮಣ್ಣಮ್ಮ ದೇವಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಬಂದರು.