ಪ್ರಬಲ ಓಟ್ಬ್ಯಾಂಕ್ ಇದ್ದರೂ ಸೋಲು: ಡಾ. ಹುಲಿನಾಯ್ಕರ್
ಕ.ಪ್ರ. ವಾರ್ತೆ ತುಮಕೂರು ಮೇ 10
ತುಮಕೂರು ನಗರದಲ್ಲಿ ಜೆಡಿಎಸ್ ಪ್ರಬಲ ಓಟ್ ಬ್ಯಾಂಕ್ ಹೊಂದಿದ್ದರೂ ಗೆಲವು ಸಾಧಿಸುವಲ್ಲಿ ವಿಫಲವಾಗಿದ್ದೇವೆ. ಜಿಲ್ಲೆ ದಳದ ಭದ್ರಕೋಟೆ ನಿಜ. ಆದರೆ ತುಮಕೂರು ನಗರದಲ್ಲಿ ಶಾಸಕ ಸ್ಥಾನಕ್ಕೆ ಗೆಲವು ಸಾಧಿಸುವಲ್ಲಿ ವಿಫಲವಾಗಿದ್ದೇವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಒಪ್ಪಿಕೊಂಡರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ನಗರ ಕ್ಷೇತ್ರಕ್ಕೆ ದಿ. ಲಕ್ಷ್ಮೀನರಸಿಂಹಯ್ಯನವರ ನಂತರ ಪ್ರಬಲ ಅಭ್ಯರ್ಥಿ ಹಾಕುವಲ್ಲಿ ಸಫಲವಾಗಿಲ್ಲ. ಜತೆಗೆ ತುಮಕೂರು ಜಿಲ್ಲೆ ದಳದ ಭದ್ರಕೋಟೆ ಎಂದೇ ಖ್ಯಾತಿ. ಹೀಗಿದ್ದರೂ ನಗರ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಸತತವಾಗಿ ಸೋಲುತ್ತಲೇ ಬಂದಿರುವುದು ವಿಷಾದನೀಯ ಸಂಗತಿ ಎಂದು ಹುಲಿನಾಯ್ಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ನಿಂದ ಬಂದು, ದಳದ ಟಿಕೆಟ್ ಪಡೆದು ಸ್ಪರ್ಧಿಸಿ, 38 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಕಾಂಗ್ರೆಸ್ ಹಾಗೂ ಕೆಜೆಪಿಗೆ ಪ್ರಬಲ ಪೈಪೋಟಿ ನೀಡಿದ ಗೆಳೆಯರ ಬಳಗದ ಗೋವಿಂದರಾಜು ಅವರಿಗೆ ಸಿಕ್ಕ ಬೆಂಬಲ ನೋಡಿದಾಗ ತುಮಕೂರು ನಗರ ದಳದ ಪ್ರಬಲ ಓಟ್ ಬ್ಯಾಂಕ್ ಹೊಂದಿರುವುದು ನಿಜ ಎಂದು ಗೋಚರಿಸುತ್ತದೆ. ಆದರೆ 1994 ರಿಂದಲೂ ತುಮಕೂರು ನಗರದಲ್ಲಿ ಶಾಸಕರನ್ನು ಹೊಂದಿಲ್ಲದೇ ಇರುವುದು ವಿಷಾದನೀಯ ಸಂಗತಿ ಎಂದರು.
ಕಾಂಗ್ರೆಸ್ ಸಹಕಾರದೊಂದಿಗೆ ಅಧಿಕಾರ: ತುಮಕೂರು ನಗರಸಭೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವುದು ಜೆಡಿಎಸ್. 13 ಸದಸ್ಯರನ್ನು ಹೊಂದಿರುವ ಜನತಾದಳ (ಎಸ್) ಕಾಂಗ್ರೆಸ್ ಸಹಕಾರದೊಂದಿಗೆ ಅಧಿಕಾರ ಹಿಡಿಯಲಿದೆ. ಈ ಹಿಂದೆ ಒಪ್ಪಂದ ಆದಂತೆ ನಗರಸಭೆಯಲ್ಲಿ ಅಧಿಕಾರ ಹಿಡಿಯಲಾಗುವುದು ಎಂದು ಪ್ರಶ್ನೆಯೊಂದಕ್ಕು ಹುಲಿನಾಯ್ಕರ್ ಉತ್ತರಿಸಿದರು.
ಭ್ರಷ್ಟ ಸರ್ಕಾರ ತೊಲಗಿದೆ: ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿದೆ. ತುಮಕೂರು ನಗರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಎದ್ದು ಕಾಣುತ್ತದೆ. ಪ್ರತಿಭಟನೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದರು. ಯಾವಾಗ ಪ್ರತಿಭಟನೆ ಮಾಡಿದ್ದಿರಿ, ದಿನಾಂಕ ಹೇಳಿ ಎಂದಾಗ ಹುಲಿನಾಯ್ಕರ್ ನಿರುತ್ತರರಾದರು.
ಭ್ರಷ್ಟ ಅಧಿಕಾರಿಗಳಿಗೆ ಮನ್ನಣೆ: ಕಳೆದ 5 ವರ್ಷಗಳಲ್ಲಿ ವಿಶೇಷವಾಗಿ ತುಮಕೂರು ನಗರದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕಲಾಗಿದೆ. ಇದಕ್ಕೆ ಉದಾಹರಣೆ ಪಿಡಬ್ಲ್ಯೂಡಿ ಯ ಎಂಜಿನಿಯರ್ ಮಂಜುನಾಥ್. ಜಿಲ್ಲೆಯ ರಸ್ತೆ ಗುಂಡಿ ಮುಚ್ಚುವಲ್ಲಿ 4 ಕೋಟಿ ರು. ಅವ್ಯವಹಾರ ಮಾಡಿ, ಜಿಲ್ಲಾ ಪಂಚಾಯತ್ ಸಭೆಯಲ್ಲಿ ಇವರಿಗೆ ಛೀಮಾರಿ ಹಾಕಲಾಗಿತ್ತು. ಆ ವ್ಯಕ್ತಿಯ ಬಗ್ಗೆ ಖುದ್ದು ಶಾಸಕರೇ ತನಿಖೆಗೂ ಆಗ್ರಹಿಸಿದ್ದರು. ಅವರು ಭ್ರಷ್ಟಾತಿಭ್ರಷ್ಟರೆಂದೇ ಕುಖ್ಯಾತಿ ಪಡೆದವರು.
ಆದರೆ ಆ ವ್ಯಕ್ತಿಯನ್ನು ಮತ್ತೆ ತುಮಕೂರು ನಗರಸಭೆಗೆ ತಂದು ಕೂರಿಸಲಾಗಿದೆ. ತುಮಕೂರು ನಗರಸಭೆಯಲ್ಲಿ 9 ಕ್ಕೂ ಹೆಚ್ಚು ಮಂದಿ ಆಯುಕ್ತರು ಬದಲಾದರು. 5 ಮಂದಿ ಅಧ್ಯಕ್ಷರು ಬದಲಾದರು. ಇದಕ್ಕೆಲ್ಲಾ ಕಾರಣ ಹಿಂದಿನ ಬಿಜೆಪಿ ಸರ್ಕಾರ ಹಾಗೂ ತುಮಕೂರು ನಗರ ಶಾಸಕರಾಗಿದ್ದ ಸೊಗಡು ಶಿವಣ್ಣನವರು ನೇರ ಹೊಣೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಜೆಡಿಎಸ್ ಸದಸ್ಯ ನಾಗರಾಜ್ ಇತರರು ಉಪಸ್ಥಿತರಿದ್ದರು.