ಮಾಲೂರು ಬಳಿ ಆನೆ ದಾಳಿ: ಒಬ್ಬ ಬಲಿ
ಕ.ಪ್ರ. ವಾರ್ತೆ ಮಾಲೂರು ಮೇ 10
ಆನೆಗಳ ದಾಳಿಯಲ್ಲಿ ಒಬ್ಬ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಕಲ್ಕೆರೆ ಬಳಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮೃತಪಟ್ಟವರನ್ನು ಚಿಕ್ಕತಿರುಪತಿಯ ರಾಮಪ್ಪ(68) ಹಾಗೂ ಗಾಯಗೊಂಡವರನ್ನು ಚಿಕ್ಕತಿರುಪತಿಯ ಕಿಟ್ಟಿ(40) ಹಾಗೂ ಜಗದೇನಹಳ್ಳಿಯ ಆಂಜಿನಪ್ಪ ಎಂದು ಗುರುತಿಸಲಾಗಿದ್ದು ಅವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಆಂಧ್ರ ಕಡೆಯಿಂದ ಬಂದ ನಾಲ್ಕು ಆನೆಗಳ ಹಿಂಡೊಂದು ತಾಲೂಕಿನ ಕಲ್ಕೆರೆ ಬಳಿ ಶುಕ್ರವಾರ ಮುಂಜಾನೆ ಕಾಣಿಸಿಕೊಂಡಿದ್ದವು. ಆಗ ಈ ಮೂವರು ಆನೆಗಳನ್ನು ನೋಡಲು ಹೋಗಿದ್ದಾಗ ಅವರ ಮೇಲೆ ದಾಳಿ ನಡೆಸಿವೆ.
ಮೂರು ದೊಡ್ಡ ಆನೆಗಳ ಜೊತೆಯಲ್ಲಿ ಒಂದು ಮರಿ ಆನೆ ಇದೆ. ಆನೆಗಳ ಹಿಂಡು ಬಂದಿರುವ ವಿಷಯ ತಿಳಿದ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿರುವ ಸ್ಥಳೀಯ ಅರಣ್ಯಾಧಿಕಾರಿ ಸುಬ್ಬರಾವ್ ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿ ಆನೆಗಳ ಬಳಿಯಲ್ಲಿ ಜನರು ಸುಳಿಯದಂತೆ ಮಾಡಲು ಹರ ಸಾಹಸ ಪಡಬೇಕಾಯಿತು. ಅರಣ್ಯಾಧಿಕಾರಿಗಳ ಎಚ್ಚರಿಕೆ ನಿರ್ಲಕ್ಷಿಸಿ ಆನೆಗಳನ್ನು ನೋಡಲು ನೀಲಗಿರಿ ತೋಪಿಗೆ ಸಾಹಸಿಗಳು ನುಗ್ಗಿದ್ದು ಘಟನೆಗೆ ಕಾರಣ ಎನ್ನಲಾಗಿದೆ.
ಕಾಮಸಮುದ್ರ ಬಳಿ ಇನ್ನೂ ಹದಿನೈದು ಆನೆಗಳು ಇರುವ ಮಾಹಿತಿ ಇದ್ದು ಅವುಗಳಿಂದ ಬೇರ್ಪಟ್ಟು ಮೂರು ಆನೆಗಳು ತಮ್ಮ ಮರಿಯಾನೆ ಜೊತೆಯಲ್ಲಿ ದಿಕ್ಕು ತಪ್ಪಿ ಬಂದಿರಬಹುದಾಗಿದ್ದು, ಅವುಗಳನ್ನು ಆ ಕಡೆಗೆ ವಾಪಸು ಕಳುಹಿಸುವುದಾಗಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಅರಣ್ಯಾ ಸಂರಕ್ಷಣಾಧಿಕಾರಿ ಮುನೇಗೌಡ, ಸಹಾಯಕ ಅರಣ್ಯಾಧಿಕಾರಿ ಪುಟ್ಟಣ್ಣ,ಪೊಲೀಸ್ ಡಿವೈಎಸ್ಪಿ ಹರಿ ಬರಗೂರು, ತಹಸೀಲ್ದಾರ್ ನಂಜಯ್ಯ ಧಾವಿಸಿದ್ದು, ಸ್ಥಳದಲ್ಲ್ಯೇ ಮೊಕ್ಕಾಂ ಹೂಡಿದ್ದಾರೆ. ಶಾಸಕ ಮಂಜುನಾಥ್ ಗೌಡ ಸ್ಥಳಕ್ಕೆ ಧಾವಿಸಿದರಲ್ಲದೇ ಜನರನ್ನು ನಿಯಂತ್ರಿಸಲು ಅರಣ್ಯಾಧಿಕಾರಿಗಳಿಗೆ ಸಾಥ್ ನೀಡಿದರು. ಶಾಸಕ ಮಂಜುನಾಥ್ ಮೃತರಿಗೆ 5 ಲಕ್ಷ ರು. ಹಾಗೂ ಗಾಯಗೊಂಡವರಿಗೆ ಒಂದು ಲಕ್ಷ ರು. ನೀಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.