ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವು: ಕುಟುಂಬದವರ ಆಕ್ರೋಶ
ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಆತನ ಕುಟುಂಬದವರು ಗುರುವಾರ ರಾತ್ರಿ ನಗರದಲ್ಲಿ ಅಕ್ರೋಶ ವ್ಯಕ್ತಪಡಿಸಿದರು. ನಗರದ ಮಿಷನ್ ಆಸ್ಪತ್ರೆಯಲ್ಲಿ ಅರಕಲಗೂಡು ತಾಲೂಕಿನ ಆಂಜನೇಯ ಹೊಸಳ್ಳ ಗ್ರಾಮದ ದೇವೇಗೌಡ ಎಂಬುವರ ಪುತ್ರ ರಾಜ (28) ಸಾವನ್ನಪ್ಪಿದ ದುರ್ದೈವಿ. ರಾಜುವಿನ ಬಲ ಕಾಲಿಗೆ ಕೆಲ ತಿಂಗಳ ಹಿಂದೆ ಪೆಟ್ಟು ಬಿದ್ದಿದ್ದ ಕಾರಣ ಆ ಭಾಗದಲ್ಲಿ ಗಂಟು ಬೆಳೆದಿತ್ತು. ಆ ಗಂಟನ್ನು ತೆಗೆಸಿಕೊಳ್ಳುವ ಸಲುವಾಗಿ ನಗರದ ಆರ್.ಸಿ.ರಸ್ತೆಯಲ್ಲಿರುವ ಮಿಷನ್ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ದಾಖಲಾಗಿದ್ದ. ಆಸ್ಪತ್ರೆ ವೈದ್ಯರು ಆತನನ್ನು ಸಂಜೆ 5 ಗಂಟೆಗೆ ಆಪರೇಷನ್ ಕೊಠಡಿಗೆ ಕರೆದೊಯ್ದರು. ನಂತರ ಆ ಕೊಠಡಿಗೆ ರಾಜುವಿನ ಕುಟುಂಬದವರಿಗೆ ನೋಡಲು ಒಳಗೆ ಬಿಟ್ಟಿರಲಿಲ್ಲ. ಆದರೆ ರಾತ್ರಿ 8 ಗಂಟೆ ಸುಮಾರಿನಲ್ಲಿ ವೈದ್ಯರು ರಾಜು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಜುವಿನ ಕುಟುಂಬದವರು ವೈದ್ಯರ ವಿರುದ್ಧ ಕಿಡಿಕಾರಿದರು. ಸ್ಥಳದಲ್ಲಿಯೇ ಪ್ರತಿಭಟನೆಗೆ ಮುಂದಾದ ಕುಟುಂಬದವರನ್ನು ಪೊಲೀಸರು ಸಮಾಧಾನ ಪಡಿಸಿದರು. ಅಲ್ಲಿ ನಿರ್ಮಾಣವಾಗಿದ್ದ ಬಿಗುವಿನ ವಾತಾವರಣ ತಿಳಿಗೊಳಿಸಿದರು. ಆಪರೇಷನ್ ಮೊದಲು ವೈದ್ಯರು ಇದು ಸಣ್ಣ ಆಪರೇಷನ್ ಅಂತ ಹೇಳಿದ್ದರು. ಆದ್ದರಿಂದ ಈ ಸಾವಿಗೆ ಕಾರಣವೇನು ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಮೃತ ರಾಜು ಅಣ್ಣ ಚಂದ್ರು ಒತ್ತಾಯಿಸಿದ್ದಾರೆ.